ದಕ್ಷಿಣ ಭಾರತದಿಂದ ಬಿಜೆಪಿ ಕಿತ್ತೊಗೆಯಲು ಕಾಂಗ್ರೆಸ್-ಜೆಡಿಎಸ್ ಪಣ: ದೇವೇಗೌಡ

Update: 2018-10-30 13:46 GMT

ಬಳ್ಳಾರಿ, ಅ.30: ದಕ್ಷಿಣ ಭಾರತದಿಂದ ಬಿಜೆಪಿಯನ್ನು ಕಿತ್ತೊಗೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಕೈ ಜೋಡಿಸಿವೆ. ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯು ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಪ ಚುನಾವಣೆ ನಡೆಯುತ್ತಿರುವ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳೆ ಗೆಲುವು ಸಾಧಿಸುವ ಮೂಲಕ ದೇಶಕ್ಕೆ ಹೊಸ ಸಂದೇಶವನ್ನು ರವಾನಿಸಲಿದ್ದಾರೆ ಎಂದರು.

ಬಿಜೆಪಿಗೆ ಕರ್ನಾಟಕವೇ ದಕ್ಷಿಣ ಭಾರತದ ಹೆಬ್ಬಾಗಿಲಾಗಿತ್ತು. ಈಗ ಆ ಹೆಬ್ಬಾಗಿಲನ್ನೆ ಮುಚ್ಚುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಕೈ ಜೋಡಿಸಿ, ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ದೇವೇಗೌಡ ಟೀಕಿಸಿದರು. ಆದುದರಿಂದಲೇ, ಬಿಜೆಪಿಯವರು ನಾನು ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಲು ವಿಧಾನಸೌಧಕ್ಕೆ ಹೋಗದೆ ಇದ್ದದ್ದನ್ನೆ ದೊಡ್ಡ ರಾಜಕೀಯ ವಿಷಯವನ್ನಾಗಿ ಮಾಡಿದ್ದಾರೆ. ಲಂಡನ್‌ನಲ್ಲಿ ಪೂರ್ವ ನಿಗದಿತ ಕಾರ್ಯಕ್ರಮ ಇದ್ದಿದ್ದರಿಂದ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನೆ ಪದೇ ಪದೇ ಪ್ರಸ್ತಾಪ ಮಾಡಿ ನನ್ನನ್ನು ಟೀಕಿಸುತ್ತಿರುವ ಬಿಜೆಪಿಯವರಿಗೆ ಸಹನಾ ಶಕ್ತಿಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸಲು ನಾವು ನಿರ್ಧರಿಸಿದ್ದೇವೆ. 1996ರಲ್ಲಿ ಪಕ್ಷಗಳನ್ನು ಒಗ್ಗೂಡಿಸುವುದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಾಲು ಹೆಚ್ಚಿತ್ತು. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಮೈತ್ರಿಗೆ ಚಂದ್ರಬಾಬು ನಾಯ್ಡು ಕೈ ಜೋಡಿಸಲಿದ್ದಾರೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿಕೊಂಡು ಮೈತ್ರಿ ಸರಕಾರವನ್ನು ರಚನೆ ಮಾಡಿದ್ದೇವೆ. ಈ ಉಪ ಚುನಾವಣೆಯಲ್ಲಿ ಉಭಯ ಪಕ್ಷಗಳ ಮುಖಂಡರು ಚರ್ಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳೆ ಗೆಲುವು ಸಾಧಿಸಬೇಕೆಂದು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಈ ಉಪ ಚುನಾವಣೆ ನಡೆಯುತ್ತಿದೆ. ಈ ಉಪ ಚುನಾವಣೆಯ ಗೆಲುವು ನಮ್ಮ ಶಕ್ತಿ ಪ್ರದರ್ಶನಕ್ಕಾಗಿ ಅಲ್ಲ. ದೇಶದ ಹೊಸ ರಾಜಕೀಯ ಬೆಳವಣಿಗೆಗೆ ಈ ಉಪ ಚುನಾವಣೆ ನಾಂದಿ ಹಾಡಲಿದೆ ಎಂದು ದೇವೇಗೌಡ ಅಭಿಪ್ರಾಯಪಟ್ಟರು.

ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಲೇಬೇಕು ಎಂದು ನಾನು ಪ್ರಚಾರ ಮಾಡುತ್ತಿದ್ದೇನೆ. ರಾಮನಗರಕ್ಕೆ ಹೋಗಿದ್ದೇನೆ. ಜಮುಖಂಡಿಗೆ ಹೋಗಿ ಎಂದು ಸಿದ್ದರಾಮಯ್ಯ ಹೇಳಿದರೆ, ನಾನು ಹೋಗುತ್ತೇನೆ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯಗಳು ಇಲ್ಲ. ಉಗ್ರಪ್ಪ ಒಬ್ಬ ಉತ್ತಮ ವ್ಯಕ್ತಿ. ಅವರು ಗೆಲ್ಲಲೇಬೇಕು ಎಂದು ಅವರು ಹೇಳಿದರು.

ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದೇನೆ. ನಮ್ಮ ಹೋರಾಟದಲ್ಲಿ ಯಾವುದೇ ವ್ಯತ್ಯಾಸಗಳು ಆಗಬಾರದು. ವಿಧಾನಸೌಧದ ಎದುರು ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಉಗ್ರಪ್ಪ ಕೊಡುಗೆ ಅಪಾರವಿದೆ. ನನಗೆ ಆತ್ಮವಿಶ್ವಾಸವಿದೆ ಬಳ್ಳಾರಿಯ ಜನ ಅವರನ್ನು ಖಂಡಿತವಾಗಿಯೂ ಗೆಲ್ಲಿಸುತ್ತಾರೆ ಎಂದು ದೇವೇಗೌಡ ತಿಳಿಸಿದರು.

ರಾಹುಲ್‌ಗೆ ಪ್ರಧಾನಿಯಾಗುವ ಅರ್ಹತೆ ಇದೆ

130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ರಾಹುಲ್‌ಗಾಂಧಿ, ಪ್ರಧಾನಿಯಾಗುವ ಎಲ್ಲ ಅರ್ಹತೆ ಗಳನ್ನು ಹೊಂದಿದ್ದಾರೆ. ರಾಹುಲ್‌ ಗಾಂಧಿ ಬಗ್ಗೆ ನಾನು ಲಘುವಾಗಿ ಮಾತನಾಡಲು ಸಿದ್ಧನಿಲ್ಲ. ಅವರನ್ನು ಪ್ರಧಾನಿ ಮಾಡಲು ನನ್ನ ಸಹಮತವಿದೆ. ರಾಷ್ಟ್ರ ಹಾಗೂ ವಿದೇಶಗಳ ರಾಜಕಾರಣವನ್ನು ಅತ್ಯಂತ ಸೂಕ್ಷ್ಮವಾಗಿ ಅವರು ಗಮನಿಸುತ್ತಿದ್ದಾರೆ.

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News