ಕುಮಾರಸ್ವಾಮಿ ಪತ್ನಿ ಅನಿತಾರವರ ಬಳಿ 167 ಕೋಟಿ ರೂ. ಆಸ್ತಿ ಬಂದಿದ್ದು ಹೇಗೆ ?: ಪ್ರತಾಪ್ ಸಿಂಹ ಪ್ರಶ್ನೆ

Update: 2018-10-30 15:31 GMT

ಶಿವಮೊಗ್ಗ, ಅ. 30: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ಆಸ್ತಿ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮೊದಲು ಪತ್ನಿ ಅನಿತಾ ಕುಮಾರಸ್ವಾಮಿಯವರ ಬಳಿಯಿರುವ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಅನಿತಾ ಕುಮಾರಸ್ವಾಮಿಯವರು 167 ಕೋಟಿ ರೂ. ಮೊತ್ತದ ಆಸ್ತಿಪಾಸ್ತಿ ಘೋಷಿಸಿಕೊಂಡಿದ್ದಾರೆ. ಇಷ್ಟೊಂದು ಪ್ರಮಾಣದ ಸಂಪತ್ತು ಸಂಗ್ರಹಿಸಲು ರಾಮನಗರಕ್ಕೆ ಹೋಗಿ ಚಿನ್ನದ ಆಲೂಗಡ್ಡೆ ಏನಾದರೂ ಬೆಳೆದಿದ್ದಾರಾ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಬಗ್ಗೆ ಕುಮಾರಸ್ವಾಮಿಯವರು ಹಗುರವಾಗಿ ಮಾತನಾಡಬಾರದು. ಕರ್ನಾಟಕದ ಜನತೆ ಮೋದಿ ಹಾಗೂ ಯಡಿಯೂರಪ್ಪರ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೆಗೌಡರ ಮೇಲೆ ಭರವಸೆಯಿಟ್ಟಿಲ್ಲ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಚಿತ್ರರಂಗದ ನಟ, ನಟಿಯರನ್ನು ಕರೆಸಿ ಪ್ರಚಾರ ನಡೆಸಿದ್ದರು. ಆದರೆ ಜನರು ಯಡಿಯೂರಪ್ಪರ ಕೈ ಹಿಡಿದರು. ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತ ಎಂದರು.

ಈ ಉಪಚುನಾವಣೆ ನಂತರ ಸರ್ಕಾರ ಪತನವಾಗುವುದು ಖಚಿತ. ಈ ಕಾರಣದಿಂದಲೇ ಸಮ್ಮಿಶ್ರ ಸರ್ಕಾರದ ನಾಯಕರು ಶಿವಮೊಗ್ಗ, ಬಳ್ಳಾರಿ ಕ್ಷೇತ್ರಗಳತ್ತ ಓಡಾಡುತ್ತಿದ್ದಾರೆ. ಗೆಲ್ಲಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರದ ಯಾವುದೇ ಪ್ರಯತ್ನ ಕೈಗೂಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News