ಅಕ್ರಮ ಆಸ್ತಿ ಉಳಿಸಿಕೊಳ್ಳಲು ಬಿಎಸ್ ವೈ ಏನು ಮಾಡಿದರೆಂಬುದನ್ನು ಯೋಚಿಸಲಿ: ಕುಮಾರಸ್ವಾಮಿ
ಶಿವಮೊಗ್ಗ, ಅ. 30: ಅಕ್ರಮ ಆಸ್ತಿ ಸಂಪಾದಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರವರು ಅದನ್ನು ಉಳಿಸಿಕೊಳ್ಳಲು ಏನೇನು ಮಾಡಿದರು ಎಂಬುವುದನ್ನು ಅವರ ಸ್ವಕ್ಷೇತ್ರ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಕುಳಿತು ಯೋಚಿಸಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಕುಟುಂಬ ಒಡೆತನದ ಪ್ರೇರಣಾ ಟ್ರಸ್ಟ್ ಗೆ ಕೋಟ್ಯಾಂತರ ರೂ. ದೇಣಿಗೆ ಪಡೆದಿದ್ದರು. ಈ ಬಗ್ಗೆ ಅವರು ಮಾಹಿತಿ ಕೊಡಲಿ ಎಂದರು. ನೀವು ಮಾಡಿದ ಅಕ್ರಮಗಳು ಮತ್ತು ಅದರಿಂದ ಹೊರಬರಲು ಏನೇನು ಮಾಡಿದ್ದೀರಿ ಎಂಬುವುದನ್ನು ಒಮ್ಮೆ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವರ ಮುಂದೆ ಕುಳಿತು ನೆನಪು ಮಾಡಿಕೊಳ್ಳಲಿ ಎಂದರು.
ತಾವು ಸಿಎಂ ಆಗಿದ್ದ ವೇಳೆ ಶಿವಮೊಗ್ಗದಲ್ಲಿ ಬಸ್ ನಿಲ್ದಾಣಕ್ಕೆ ಜಾಗ ಬಿಡಿಸಿಕೊಟ್ಟಿದ್ದೆ. ಶಿವಮೊಗ್ಗದಲ್ಲಿ ಎಷ್ಟೆಷ್ಟು ಕಾರ್ಖಾನೆಗಳು ಮುಚ್ಚಿದ್ದವು. ಅವುಗಳನ್ನು ಉಳಿಸಲು ನೀವು ಪಟ್ಟ ಪ್ರಾಮಾಣಿಕ ಪ್ರಯತ್ನವೇನು? ಮೂರ್ನಾಲ್ಕು ರಸ್ತೆಗಳನ್ನು ಅಭಿವೃದ್ದಿ ಮಾಡಿಕೊಂಡು ತಮ್ಮ ಆಸ್ತಿಗೆ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆಯೂ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಟೀಕಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ 20 ಉಪ ಚುನಾವಣೆ ನಡೆಸಿದ್ದರು. ಈ ವೇಳೆ ಅವರು ಕೆಲವು ವಿಧಾನಸಭಾ ಕ್ಷೇತ್ರಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆಗ ನೀತಿ ಸಂಹಿತೆ ಉಲ್ಲಂಘನೆಯಾಗಿರಲಿಲ್ಲವೇ ಎಂದು ತಮ್ಮ ವಿರುದ್ಧ ಬಿಜೆಪಿಯವರು ದಾಖಲಿಸಿರುವ ನೀತಿಸ ಸಂಹಿತೆ ದೂರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಂದಿದ್ದು ಯಾರು: ದೇವೇಗೌಡರ ಮನೆಗೆ ನಾನ್ಯಾಕೆ ಹೋಗಲಿ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, '2005 ರಲ್ಲಿ ಅವರು ಯಾರ ಮನೆಗೆ ಬಂದಿದ್ದರು ಎಂಬುವುದನ್ನು ಅವರು ನೆನಪಿಟ್ಟುಕೊಳ್ಳಲಿ. ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ನನಗೆ ಚೀಟಿ ಕಳುಹಿಸಿದ್ದರು. ಆಗ ದೇವೇಗೌಡರ ಮನೆಗೆ ಬಂದಿದ್ದು ಯಾರು ಎಂಬುವುದನ್ನು ಅವರೇ ಹೇಳಬೇಕು' ಎಂದು ಯಡಿಯೂರಪ್ಪ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಜೊತೆ ಸರ್ಕಾರ ರಚಿಸಿದ ಸಂದರ್ಭದಲ್ಲಿ ರೆಡ್ಡಿಗಳು ನನ್ನ ಮೇಲೆ 150 ಕೋಟಿ ರೂ. ಲಂಚದ ಆರೋಪ ಹೊರಿಸಿದ್ದರು. ತಮ್ಮ ಮೇಲೆ ಬಳ್ಳಾರಿಯಲ್ಲಿ ಕೇಸ್ ದಾಖಲಿಸಿದ್ದರು. ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗೋಷ್ಠಿಯಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಅಭ್ಯರ್ಥಿ ಮಧು ಬಂಗಾರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಮಂಜುನಾಥಗೌಡ, ಮುಖಂಡರಾದ ಎಂ.ಶ್ರೀಕಾಂತ್, ಶಾರದಾ ಪೂರ್ಯನಾಯ್ಕ್, ಎನ್.ಹೆಚ್.ಕೋನರೆಡ್ಡಿ ಸೇರಿದಂತೆ ಮೊದಲಾದವರಿದ್ದರು.