ಜಮಖಂಡಿಯನ್ನು ಜಿಲ್ಲೆ ಮಾಡುವ ಕನಸು ಹೊಂದಿದ್ದ ಸಿದ್ದುನ್ಯಾಮಗೌಡ: ಡಾ.ಜಿ.ಪರಮೇಶ್ವರ್

Update: 2018-10-30 16:23 GMT

ಜಮಖಂಡಿ, ಅ.30: ಭವಿಷ್ಯದಲ್ಲಿ ಜಮಖಂಡಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ದೂರಾಲೋಚನೆ ಹೊಂದಿದ್ದ ಸಿದ್ದು ನ್ಯಾಮಗೌಡರು ಈ ಭಾಗದಲ್ಲಿ ದೊಡ್ಡ ಕಚೇರಿ ನಿರ್ಮಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ಆನಂದ ನ್ಯಾಮಗೌಡರಿಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

ಜಮಖಂಡಿಯಲ್ಲಿ ಮಂಗಳವಾರವೂ ವಿವಿಧೆಡೆ ರ್ಯಾಲಿ ನಡೆಸಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದು ನ್ಯಾಮಗೌಡ ಅವರು ಈ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿಯ ಕುಲಕರ್ಣಿ ಅವರು ಕೊನೆಯ ಬಾರಿ ನಿಲ್ಲುತ್ತಿದ್ದೇನೆ ಎಂದು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದರು.

70 ವರ್ಷದ ತರುಣ ಕುಲಕರ್ಣಿ ಆರು ಬಾರಿ ಸ್ಪರ್ಧೆ ಮಾಡಿ ಕೇವಲ ಒಂದೇ ಅವಧಿಗೆ ಗೆದ್ದವರು. ಆದರೆ, ಅವರ ಐದು ವರ್ಷದ ಸಾಧನೆ ಮಾತ್ರ ಶೂನ್ಯ. ಸಿದ್ದು ನ್ಯಾಮಗೌಡರು ಹಾಗೂ ಕುಲಕರ್ಣಿ ಇಬ್ಬರ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಿದರೆ ಯಾರು ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಸತ್ಯ ಜನರಿಗೆ ಅರಿವಾಗಲಿದೆ ಎಂದು ಪರಮೇಶ್ವರ್ ಹೇಳಿದರು.

ಸಿದ್ದು ನ್ಯಾಮಗೌಡ ಮಾದರಿಯಲ್ಲೆ ಅವರ ಮಗ ಆನಂದ ನ್ಯಾಮಗೌಡ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಾನು ನಿಲ್ಲುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪರಮೇಶ್ವರ್, ಜಮಖಂಡಿಯಲ್ಲಿ ಕಡಪಟ್ಟಿ ಬಸವ ದೇವಸ್ಥಾನ ಹಾಗೂ ಹಝ್ರತ್ ಸೈಯದ್ ಅಬೂಬಕ್ಕರ್ ರಹಮತುಲ್ಲಾ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News