ಕೊಡಗು ನಿರಾಶ್ರಿತರಿಗೆ ಮನೆ ನಿರ್ಮಾಣ: 31.63 ಕೋಟಿ ರೂ. ಬಿಡುಗಡೆಗೆ ಮನವಿ

Update: 2018-10-30 18:21 GMT

ಮಡಿಕೇರಿ, ಅ.30: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ನಿರಾಶ್ರಿತ ಕುಟುಂಬದವರಿಗೆ ಮನೆ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ ಐದು ಕಡೆಗಳಲ್ಲಿ ಜಾಗ ಗುರುತಿಸಲಾಗಿದ್ದು, ತಲಾ 30*40 ಅಡಿ ಅಳತೆಯ ಗುರುತು ಮಾಡುವ ಕಾರ್ಯವು ನ.2 ರಿಂದ ಆರಂಭಗೊಳ್ಳಲಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು ತಿಳಿಸಿದ್ದಾರೆ.       

ಈಗಾಗಲೇ ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿಯ ಕೆ.ನಿಡುಗಣೆ ಗ್ರಾಮದ ಸರ್ವೆ ನಂಬರ್ 1/50 ನಲ್ಲಿ 4.60 ಎಕರೆ, ಕೆ.ನಿಡುಗಡೆ ಗ್ರಾಮದ ಸರ್ವೆ ನಂಬರ್ 1/13 ನಲ್ಲಿ 11.80 ಎಕರೆ, ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 178/1 ನಲ್ಲಿ 04 ಎಕರೆ ಗಾಳಿಬೀಡು ಗ್ರಾಮದ ಸರ್ವೆ ನಂಬರ್ 103 ನಲ್ಲಿ 9.50 ಎಕರೆ, ಗಾಳಿಬೀಡು ಸರ್ವೆ ನಂಬರ್ 99/3 ನಲ್ಲಿ  7.50 ಎಕರೆ, ಗಾಳಿಬೀಡು ಗ್ರಾಮದ ಸರ್ವೆ ನಂಬರ್ 100/3 ನಲ್ಲಿ 7.40 ಎಕರೆ, ಸಂಪಾಜೆ ಹೋಬಳಿಯ ಮದೆ ಗ್ರಾಮದ ಸರ್ವೆ ನಂಬರ್ 399 ನಲ್ಲಿ 11.28, ಬಿಳಿಗೇರಿ ಗ್ರಾಮದ ಸರ್ವೆ ನಂಬರ್ 347/3 ನಲ್ಲಿ 1.88 ಎಕರೆ, ಸಂಪಾಜೆ ಹೋಬಳಿಯ ಬಿಳಿಗೇರಿ 347/3 ನಲ್ಲಿ 1.50 ಎಕರೆ, ಸಂಪಾಜೆ 54/1 ನಲ್ಲಿ 1.50 ಎಕರೆ, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಜಂಬೂರು 13/1 ನಲ್ಲಿ 50 ಎಕರೆ, ಕುಶಾಲನಗರ ಹೋಬಳಿಯ ಕುಶಾಲನಗರದಲ್ಲಿ ಸರ್ವೆ ನಂಬರ್ 17 ನಲ್ಲಿ 1.00 ಎಕರೆ ಒಟ್ಟು 110.46 ಎಕರೆ ಜಾಗ ಗುರ್ತಿಸಲಾಗಿದೆ. ಆದರೆ ಪ್ರಥಮ ಹಂತದಲ್ಲಿ ಆಯ್ದ ಐದು ಕಡೆಗಳಲ್ಲಿ 30*40 ಅಡಿ ನಿವೇಶನ ಅಳತೆ ಗುರುತು ಮಾಡುವ ಕಾರ್ಯವು ನವೆಂಬರ್ 2 ರಿಂದ ಆರಂಭಗೊಳ್ಳಲಿದೆ ಎಂದರು.      

ಮನೆ ಕಳೆದುಕೊಂಡ ನಿರಾಶ್ರಿತರನ್ನು ಗುರುತಿಸಲು ವೈಯಕ್ತಿಕ ಸರ್ವೆ ಕಾರ್ಯವು ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆದಿದ್ದು, ಅದರಂತೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು, ಆಕ್ಷೇಪಣೆಗಳನ್ನು ಪರಿಶೀಲಿಸಿ ಒಟ್ಟು 840 ನಿರಾಶ್ರಿತ ಕುಟುಂಬಗಳನ್ನು ಗುರುತಿಸಲಾಗಿದ್ದು, ಈ ಕುಟುಂಬಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ 524, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 205, ಸೋಮವಾರಪೇಟೆ ತಾಲೂಕಿನಲ್ಲಿ 88 ಮತ್ತು ಕುಶಾಲನಗರ ಪಟ್ಟಣ ಪಂ. ವ್ಯಾಪ್ತಿಯಲ್ಲಿ 23 ಒಟ್ಟು 840 ನಿರಾಶ್ರಿತ ಕುಟುಂಬಗಳಿಗೆ ಮನೆ ನಿರ್ಮಿಸಬೇಕಿದೆ. ಇವರಲ್ಲಿ 94 ಕುಟುಂಬಗಳು ಅವರ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವಿಶೇಷ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.  

ಈಗಾಗಲೇ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿರುವ ಭೂಮಿಯನ್ನು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರ ತಂಡವು ಸ್ಥಳ ಪರಿಶೀಲನೆ ಮಾಡಿದ್ದು, ಮನೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮತ್ತು ಬಡಾವಣೆ ಅಭಿವೃದ್ಧಿಗೆ ಒಟ್ಟು 31.63 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಈಗಾಗಲೇ ಸರ್ಕಾರಕ್ಕೆ ಜಿಲ್ಲಾಧಿಕಾರಿಯವರು ಸಲ್ಲಿಸಿದ್ದಾರೆ. 

ಅಂದಾಜು ಪಟ್ಟಿ ವಿವರ: ಸಂಪಾಜೆ ಗ್ರಾಮದ 1.17 ಎಕರೆ ಜಾಗದಲ್ಲಿ 27 ನಿವೇಶನ ಗುರುತಿಸಲಾಗಿದ್ದು, ಅಂದಾಜು ಮೊತ್ತ ರೂ.3.30 ಕೋಟಿ, ಗಾಳಿಬೀಡು ಗ್ರಾಮದ 6.75 ಎಕರೆ ಭೂಮಿಯಲ್ಲಿ 126 ನಿವೇಶನ ಗುರುತಿಸಲಾಗಿದ್ದು, ಒಟ್ಟು 8.25 ಕೋಟಿ ರೂ., ಮದೆ ಗ್ರಾಮದಲ್ಲಿ 10.50 ಎಕರೆ ಭೂಮಿಯಲ್ಲಿ 152 ನಿವೇಶನಗಳನ್ನು ಗುರುತಿಸಲಾಗಿದ್ದು, ಒಟ್ಟು 12.54 ಕೋಟಿ ರೂ., ಕರ್ಣಂಗೇರಿ ಗ್ರಾಮದ 1.93 ಎಕರೆ ಭೂಮಿಯಲ್ಲಿ 39 ನಿವೇಶನ ಗುರುತಿಸಲಾಗಿದ್ದು, 4.02 ಕೋಟಿ ರೂ. ಹಾಗೆಯೇ ಬಿಳಿಗೇರಿ ಗ್ರಾಮದಲ್ಲಿ 2.11 ಎಕರೆ ಭೂಮಿಯಲ್ಲಿ 29 ನಿವೇಶನ 3.52 ಕೋಟಿ ರೂ. ಒಟ್ಟಾರೆ ಪ್ರಥಮ ಹಂತದಲ್ಲಿ 373 ನಿವೇಶನಗಳನ್ನು ಅಭಿವೃದ್ಧಿಪಡಿಸಲು ಒಟ್ಟು 31.63 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂದು ಜಗದೀಶ್ ಅವರು ಮಾಹಿತಿ ನೀಡಿದರು.   

ಮಾದಾಪುರ ಬಳಿಯ ತೋಟಗಾರಿಕೆ ಇಲಾಖೆಗೆ ಸೇರಿದ 50 ಎಕರೆ ಜಾಗ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಡಾವಣೆ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News