ಹತಾಶರಾದಾಗ ತೇಜೋವಧೆಗಿಳಿಯುವುದು ಬಿಜೆಪಿ ಸಂಸ್ಕೃತಿ: ಚಿಕ್ಕಮಗಳೂರು ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್
ಚಿಕ್ಕಮಗಳೂರು, ಅ.31: ಮಾಜಿ ಸಿಎಂ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಮಗನ ಅಕಾಲಿಕ ಸಾವಿನ ಕುರಿತು ಮಾಜಿ ಸಚಿವ, ಬಿಜೆಪಿ ಮುಖಂಡ ಜನಾರ್ಧನರೆಡ್ಡಿ ಹೇಳಿಕೆ ಹಿಂದೆ ಹತಾಶಾ ಮನೋಭಾವನೆ ಇದ್ದು, ಹತಾಶರಾದಾಗ ತಮ್ಮ ವಿರೋಧಿಗಳ ಹಿನ್ನೆಲೆ, ಚಾರಿತ್ಯ್ಯವನ್ನೂ ಲೆಕ್ಕಿಸದೇ ತೇಜೋವಧೆಗಿಳಿಯುವುದು ಬಿಜೆಪಿ ಪಕ್ಷದ ಸಂಸ್ಕೃತಿಯಾಗಿದೆ. ಇಂತಹ ನಿರ್ಲಜ್ಜರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯ್‍ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಪಕ್ಷದ ಬಹುತೇಕ ಮುಖಂಡರ ಹಿನ್ನೆಲೆ ಏನೆಂದು ಜನತೆಗೆ ತಿಳಿದಿದೆ. ಬಳ್ಳಾರಿಯಲ್ಲಿ ಗಣಿ ಸಂಪತ್ತನ್ನು ಅಕ್ರಮವಾಗಿ ಲೂಟಿ ಮಾಡಿ ಜೈಲು ಸೇರಿದ್ದ ಜನಾರ್ಧನ ರೆಡ್ಡಿ ಪ್ರಸಕ್ತ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ. ಈ ಹತಾಶೆಯಿಂದ ಅವರು ರಾಜ್ಯದ ಧೀಮಂತ ರಾಜಕಾರಣಿ ಎಂದೇ ಜನಮಾನಸದಲ್ಲಿ ನೆಲೆಸಿರುವ, ವಿರೋಧಿಗಳಿಂದಲೂ ಶಹಬ್ಬಾಸ್‍ಗಿರಿ ಪಡೆದಿರುವ ಸಿದ್ದರಾಮಯ್ಯ ಅವರಂತಹ ರಾಜಕಾರಣಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಮೂಲಕ ಅವರು ರಾಜಕೀಯವಾಗಿ ಮತ್ತೆ ನೆಲೆಕಂಡುಕೊಳ್ಳುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಜನತೆಗೆ ಜನಾರ್ಧನರೆಡ್ಡಿ ಮತ್ತವರ ಪಟಾಲಂ ಇತಿಹಾಸ ತಿಳಿದಿದ್ದು, ಜನತೆ ಶೀಘ್ರ ಅವರಿಗೆ ಬುದ್ಧಿ ಕಲಿಸಲಿದ್ದಾರೆಂದು ಜರಿದರು.
ಸಾವಿಲ್ಲದ ಮನೆಗಳಿಲ್ಲ. ಆದರೆ ಸಾವನ್ನೇ ಸಂಭ್ರಮಿಸುವ ಮನಸ್ಥಿತಿ ಜನಾರ್ಧನ ರೆಡ್ಡಿಗೆ ಬಂದಿರುವುದು ದುರದೃಷ್ಟಕರ ಸಂಗತಿ. ನಾಲಗೆ ಮೇಲೆ ಹಿಡಿತ ಇಲ್ಲದವನು ರಾಜಕಾರಣಿಯಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಪುತ್ರನ ಅಕಾಲಿಕ ಸಾವಿನ ಬಗ್ಗೆ ಅವರು ನಾಲಿಗೆ ಹರಿಯಬಿಟ್ಟಿರುವುದು ಅವರ ಸಂಸ್ಕೃತಿ, ಹಿನ್ನೆಲೆಗೆ ಕನ್ನಡಿ ಹಿಡಿಯುತ್ತಿದೆ ಎಂದು ಟೀಕಿಸಿದ ಅವರು, ಸೋಲಿನ ಹತಾಶೆಯಲ್ಲಿ ಕುಟುಂಬದ ನೋವಿನ ಸಂಗತಿಗಳನ್ನು ಎಳೆದು ತಂದು ತೇಜೋವಧೆ ಮಾಡಿರುವ ಜನಾರ್ಧನರೆಡ್ಡಿ ಅವರಿಗೆ ಮನುಷ್ಯತ್ವವೆ ಇಲ್ಲ. ಇಂತವರು ರಾಜಕೀಯ ಕ್ಷೇತ್ರದಲ್ಲಿರಲು ನಾಲಾಯಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂತಹವರು ಎಂದು ರೆಡ್ಡಿಗೆ ಅವರು ನೀಡಿರುವ ಪ್ರತಿಕ್ರಿಯೆಯೇ ಸಾಕ್ಷಿ. ತಮ್ಮ ತಪ್ಪು ಮುಚ್ಚಿಕೊಳ್ಳಲು ಹಾಗೂ ಗಣಿಧಣಿಯಾಗಿದ್ದವರನ್ನು ಜೈಲಿಗಟ್ಟಿಸಿದ ದ್ವೇಷದಿಂದ ಹತಾಶರಾಗಿ ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಸೆರೆಮನೆ ವಾಸದ ರುಚಿ ಕಂಡಿರುವ ಜನಾರ್ಧನ ರೆಡ್ಡಿ ಅವರನ್ನು ಬಳ್ಳಾರಿಯ ಜನತೆಯೇ ಗಡಿಪಾರು ಮಾಡಲಿದ್ದಾರೆ. ಅವರು ತಮ್ಮ ಹೇಳಿಕೆಗೆ ಶೀಘ್ರ ಕ್ಷಮಾಪಣೆ ಕೇಳದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ಇದೇ ವೇಳೆ ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಮುಹಮ್ಮದ್ ಮಾತನಾಡಿ, ಜನಾರ್ಧನ ರೆಡ್ಡಿ ಇತಿಹಾಸ ಇಡೀ ನಾಡಿಗೆ ತಿಳಿದಿದೆ. ಇಂತಹ ಲೂಟಿಕೋರನಿಂದ ಸಿದ್ದರಾಮಯ್ಯ ಪಾಠ ಕಲಿಯಬೇಕಿಲ್ಲ. ಬಳ್ಳಾರಿ ರೆಡ್ಡಿಯ ಆಸ್ತಿಯಲ್ಲ. ಈ ಹಿಂದೆ ರೆಡ್ಡಿಗೆ ಸವಾಲು ಹಾಕಿ ಪಾದಯಾತ್ರೆ ಮೂಲಕ ಬಳ್ಳಾರಿ ಜನರ ಪ್ರೀತಿ ಗಳಿಸಿರುವ ಸಿದ್ದರಾಮಯ್ಯ ಅವರ ನಡೆಕಂಡು ರಾಜ್ಯದ ಜನತೆ ಅವರನ್ನು ಸಿಎಂ ಮಾಡಿದ್ದಾರೆಂದ ಅವರು, ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ಕೀಳು ಭಾಷೆಯಲ್ಲಿ ನಿಂದಿಸಿರುವ ಅವರು ನಾಡಿನ ಜನತೆಗೆ ಅವಮಾನ ಮಾಡಿದ್ದಾರೆ. ರೆಡ್ಡಿ ಮತ್ತೊಮ್ಮೆ ಜೈಲು ಪಾಲಾಗುವ ದಿನ ದೂರವಿಲ್ಲ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಜಿಲ್ಲಾ ಕಾಂಗ್ರೆಸ್‍ನ ನೂರಾರು ಮುಖಂಡರು, ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜನಾರ್ಧನ ರೆಡ್ಡಿ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರಾದ ಎ.ಎನ್.ಮಹೇಶ್, ರೂಬಿನ್ ಮೋಸೆಸ್, ಸಂದೀಪ್, ಶಿವಕುಮಾರ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.