ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಗೆ ರಾಷ್ಟ್ರ ನಾಯಕರ ನೆನಪು: ಮಲ್ಲಿಕಾರ್ಜುನ ಖರ್ಗೆ

Update: 2018-10-31 13:44 GMT

ಹುಬ್ಬಳ್ಳಿ, ಅ. 31: ಬಿಜೆಪಿ ಮುಖಂಡರಿಗೆ ಒಂದೊಂದು ವರ್ಷ ಒಬ್ಬೊಬ್ಬ ರಾಷ್ಟ್ರ ನಾಯಕರ ನೆನಪು ಬರುತ್ತದೆ. ಅದು ಚುನಾವಣಾ ಸಂದರ್ಭದಲ್ಲಿ ಮಾತ್ರ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ದಾರ್ ವಲ್ಲಭಬಾಯ್ ಪಟೇಲರ ಬಗ್ಗೆ ಬಿಜೆಪಿಗೆ ಈಗ ನೆನಪಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟೇಲರ ಪ್ರತಿಮೆ ಉದ್ಘಾಟನೆ ಮೂಲಕ ಬಿಜೆಪಿ ಗಿಮಿಕ್ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಮತ್ತು ಆರೆಸೆಸ್ಸ್ ಕಚೇರಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಲ್ಲ. ಅವರ ಕಚೇರಿಯಲ್ಲಿ ಆರೆಸೆಸ್ಸ್ ನಾಯಕರ ಫೋಟೋಗಳಿವೆ. ನಾವು ಮೊದಲಿನಿಂದಲೂ ರಾಷ್ಟ್ರ ನಾಯಕರನ್ನು ಗೌರವಿಸುತ್ತ ಬಂದಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮೋದಿಯವರ ಅಪ್ಪಣೆ ಇಲ್ಲದೆ ಯಾವ ಗೃಹಮಂತ್ರಿಗಳೂ ಕೆಲಸ ಮಾಡುವಂತಿಲ್ಲ. ಹೊಸ ಪ್ರತಿಮೆಗಳನ್ನು ಕಟ್ಟಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋದಿ ಅವರು ಹಲವು ಹಗರಣಗಳನ್ನು ಎದುರಿಸುತ್ತಿದ್ದು, ಅದನ್ನು ಬೇರೆಡೆ ಸೆಳೆಯಲು ಈ ರೀತಿ ನಾಟಕ ಆಡುತ್ತಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಉಪ ಚುನಾವಣೆಗಳಲ್ಲಿ ನಾವೆ ಗೆಲ್ಲುತ್ತೇವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ಪ್ರಧಾನಿ ಅಭ್ಯರ್ಥಿ. ಅವರು ಪ್ರಧಾನಿಯಾಗುವುದು ನಿಶ್ಚಿತ. ಪಿ.ಚಿದಂಬರಂ ಅವರ ಹೇಳಿಕೆ ವೈಯಕ್ತಿಕ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News