ಉಪ ಚುನಾವಣೆ: ಬಹಿರಂಗ ಪ್ರಚಾರಕ್ಕೆ ನ.1 ರಂದು ತೆರೆ
ಬೆಂಗಳೂರು, ಅ. 31: ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ(ನ.1) ಸಂಜೆ ತೆರೆ ಬೀಳಲಿದ್ದು, ಕೊನೆಯ ಕ್ಷಣದಲ್ಲಿ ಮತದಾರರ ಮನಗೆಲ್ಲಲು ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಘಟಾನುಘಟಿ ಮುಖಂಡರು ಅಬ್ಬರದ ಪ್ರಚಾರ ನಡೆಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶವಕುಮಾರ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಪ್ರಚಾರ ನಡೆಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದರೆ, ಅತ್ತ ಜಮಖಂಡಿ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೈತ್ರಿ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಬಿರುಸಿನ ಪ್ರಚಾರ ಕೈಗೊಂಡರು.
ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಯೂ ಆಗಿರುವ ತನ್ನ ಪುತ್ರ ರಾಘವೇಂದ್ರ ಪರ ಪ್ರಚಾರ ನಡೆಸಿದರೆ, ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸಹೋದರಿ ಜೆ.ಶಾಂತಾ ಪರ ಮತಯಾಚನೆ ಮಾಡಿದರು. ಇದೇ ವೇಳೆ ಜನಾರ್ದನ ರೆಡ್ಡಿ, ಸಿದ್ದರಾಮಯ್ಯನವರ ಪುತ್ರನ ಬಗ್ಗೆ ನೀಡಿದ ಹೇಳಿಕೆಗೆ ಕ್ಷಮೆ ಕೋರಿದರು.
ನಾಳೆ (ನ.1) ಸಂಜೆ 6ಗಂಟೆಗೆ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮತದಾರರಲ್ಲದವರು ನಾಳೆಯಿಂದ ಕ್ಷೇತ್ರಬಿಟ್ಟು ಹೊರ ಹೋಗುವಂತೆ ಈಗಾಗಲೇ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಹೀಗಾಗಿ ನಾಳೆ ಸಂಜೆ ವೇಳೆ ಎಂಟತ್ತು ದಿನಗಳಿಂದ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬೀಡುಬಿಟ್ಟಿದ್ದ ಮುಖಂಡರು ಗಂಟು-ಮೊಟೆ ಕಟ್ಟಲಿದ್ದಾರೆ.
ನ.3ರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಚುನಾವಣೆ ನಡೆಯಲಿದ್ದು, ಉಳಿದ ಒಂದು ದಿನ ಕ್ಷೇತ್ರದ ಮತದಾರರಾಗಿರುವ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಮತದಾರರ ಮನಸ್ಸು ಗೆಲ್ಲಲು ಕೊನೆಯ ಕ್ಷಣದಲ್ಲಿ ಮನೆ-ಮನೆ ಪ್ರಚಾರ ಕೈಗೊಳ್ಳಲಿದ್ದು, ಬಿರುಸಿನ ಪ್ರಚಾರ ನಡೆಸಲಿದ್ದಾರೆ.