ಜನರಿಗೆ ಬೇಕಿರುವುದು ‘ವಾಯ್ಸ್ ಆಫ್ ಬಳ್ಳಾರಿ’ಯೇ ಹೊರತು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಲ್ಲ: ಸಿದ್ದರಾಮಯ್ಯ

Update: 2018-10-31 14:11 GMT

ಬಳ್ಳಾರಿ, ಅ.31: ಜನರಿಗೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಬೇಕಾಗಿಲ್ಲ. ಅವರಿಗೆ ಬೇಕಿರುವುದು ‘ವಾಯ್ಸ್ ಆಫ್ ಬಳ್ಳಾರಿ’. ವಿ.ಎಸ್.ಉಗ್ರಪ್ಪ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಲೋಕಸಭೆಯಲ್ಲಿ ಈ ಭಾಗದ ಬಗ್ಗೆ ಧ್ವನಿ ಎತ್ತುತ್ತಾರೆ. ಅವರೊಬ್ಬ ಉತ್ತಮ ವಾಗ್ಮಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಜೊತೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕುರಿತು ಉಗ್ರಪ್ಪ ಸತ್ಯ ಶೋಧನಾ ವರದಿ ನೀಡಿದ್ದರು. ಇವರ ವರದಿಯ ಅನ್ವಯವೇ ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂಬುದನ್ನು ಉಲ್ಲೇಖಿಸಿದ್ದು ಎಂದರು.

ಈ ಹಿಂದೆ ಸಂಸದೆಯಾಗಿದ್ದ ಜೆ.ಶಾಂತಾ ಬಳ್ಳಾರಿ ಜಿಲ್ಲೆಯ ಬಗ್ಗೆ ಒಮ್ಮೆಯೂ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಶ್ರೀರಾಮುಲುಗೆ 371 ಜೆ ಗೊತ್ತಿಲ್ಲ. ಅದರ ಬದಲು ಐಪಿಸಿ ಸೆಕ್ಷನ್‌ಗಳು ಗೊತ್ತಿರಬಹುದು ಎಂದು ಹೇಳಿದ್ದೆ. ಆದರೆ, ನಾನು ಅವರನ್ನೆ 420 ಎಂದು ಕರೆದೆ ಎಂದು ಬಿಂಬಿಸಿ, ಅದಕ್ಕೆ ಜಾತಿ ಬಣ್ಣ ಕೊಟ್ಟಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮುದಾಯದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ಶ್ರೀರಾಮುಲು ತನ್ನಷ್ಟಕ್ಕೆ ತಾನೇ ಈ ವಿಚಾರವನ್ನು ಹುಟ್ಟಿಸಿಕೊಂಡು, ನಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಬಳ್ಳಾರಿಯ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನವೆಂಬರ್ 3ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ನಡೆಯಲಿದೆ. ಇದು ಅನಗತ್ಯವಾಗಿ ಬಂದಿರುವ ಚುನಾವಣೆ. ಕಳೆದ ಬಾರಿ ಶ್ರೀರಾಮುಲು ಈ ಭಾಗದ ಸಂಸದರಾಗಿ ಆಯ್ಕೆಯಾಗಿದ್ದರು. ಅವರಿಗೆ ಇನ್ನೂ ಒಂದು ವರ್ಷ ಸದಸ್ಯತ್ವ ಅವಧಿ ಇತ್ತು. ಆದರೂ, ದುರಾಸೆಯಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಅವರು ಟೀಕಿಸಿದರು.

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಬಳ್ಳಾರಿಯ ಮತದಾರರನ್ನು ಶ್ರೀರಾಮುಲು ಕೇಳಿದ್ದರೆ? ಪದೇ ಪದೇ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಕಾರಣವಾಗುತ್ತಿರುವ ಶ್ರೀರಾಮುಲು ವರ್ತನೆಗೆ ಜನಸಾಮಾನ್ಯರು ಬೇಸತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ರೆಡ್ಡಿ ಸಹೋದರರು ನನ್ನನ್ನು ಹೆದರಿಸಲು ಬಂದರು. ಧೈರ್ಯ ಇದ್ದರೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ್ದರು. ಆದುದರಿಂದಲೇ, ನಾನು ಅವರ ವಿರುದ್ಧ ತೊಡೆತಟ್ಟಿ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದೆವು ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಯಾವುದೇ ರೀತಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎನ್ನುವುದಾದರೇ, ಜೈಲಿಗೆ ಯಾಕೆ ಹೋದರು? ಇವರಿಗೆ ಬಂಗಾರದ ಜೀವನ ಹೇಗೆ ಬಂತು? ಸುಖಾಸುಮ್ಮನೆ ಜನಾರ್ದನ ರೆಡ್ಡಿಯನ್ನು ನ್ಯಾಯಾಧೀಶರು ಜೈಲಿಗೆ ಅಟ್ಟಿದ್ದರೆ? ಯಾವುದೇ ದಾಖಲಾತಿಗಳನ್ನು ಪರಿಶೀಲಿಸದೇ, ಅಮಾಯಕರನ್ನು ಯಾರಾದರೂ ಜೈಲಿಗೆ ಕಳುಹಿಸುತ್ತಾರಾ? ಎಂದು ಅವರು ಪ್ರಶ್ನಿಸಿದರು.

ಯಾವುದೇ ತಪ್ಪು ಮಾಡಿಲ್ಲ, ಅಕ್ರಮ ಮಾಡದಿದ್ದರೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಯಾಕೆ ಬರುತ್ತಿಲ್ಲ? ಬಿಜೆಪಿಯವರು ಏಕೆ ಅವರನ್ನು ಬಹಿರಂಗವಾಗಿ ತಮ್ಮ ಪಕ್ಷದ ವೇದಿಕೆಗೆ ಬರ ಮಾಡಿಕೊಳ್ಳುತ್ತಿಲ್ಲ ಎಂದ ಸಿದ್ದರಾಮಯ್ಯ, ಮನುಷ್ಯತ್ವ ಇಲ್ಲದವರು ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಹುಟ್ಟಿದ್ದೇ ಸಾಧನೆಯೇ?

ಶ್ರೀರಾಮುಲು ಬಳ್ಳಾರಿಯಲ್ಲಿ ಹುಟ್ಟಿದ್ದೇ ದೊಡ್ಡ ಸಾಧನೆಯೇ? ಉಗ್ರಪ್ಪ ರಾಜಕಾರಣಕ್ಕೆ ಬಂದಾಗ ಶ್ರೀರಾಮುಲು ಎಲ್ಲಿದ್ದರು ಅನ್ನೋದು ಅವರಿಗೆ ಗೊತ್ತಾ? ವಾಲ್ಮೀಕಿ ಸಮುದಾಯದ ಕಲ್ಯಾಣಕ್ಕಾಗಿ ಉಗ್ರಪ್ಪ ಅಪಾರ ಕೊಡುಗೆ ನೀಡಿದ್ದಾರೆ. ಶಾಸಕರ ಭವನದ ಎದುರು ಮಹರ್ಷಿ ವಾಲ್ಮೀಕಿ ಪುತ್ಥಳಿ, ತಪೋವನ ಸ್ಥಾಪನೆಗೆ ಉಗ್ರಪ್ಪ ಕಾರಣ ಎಂದು ಅವರು ಹೇಳಿದರು. ನಮಗೆ ಸವಾಲು ಹಾಕುವ ಶ್ರೀರಾಮುಲು ‘ಕ್ಷ’ ಎನ್ನುವ ಅಕ್ಷರ ಪ್ರತ್ಯೇಕ ಅಕ್ಷರನಾ ಅಥವಾ ಸಂಯುಕ್ತ ಅಕ್ಷರನಾ ಅನ್ನೋದನ್ನು ಹೇಳಲಿ. ನನ್ನ ಅಕ್ಷರ ಉಚ್ಛಾರಣೆ ಬಗ್ಗೆ ಟೀಕಿಸುವ ಶ್ರೀರಾಮುಲುಗೆ ಅಕ್ಷರಗಳ ಬಗ್ಗೆ ಏನು ಗೊತ್ತು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಶ್ರೀರಾಮುಲು ಪ್ರತಿನಿಧಿಸುತ್ತಿರುವ ಮೊಳಕಾಲ್ಮೂರು ಕ್ಷೇತ್ರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದು ಉಗ್ರಪ್ಪ. ಅವರ ಮನವಿ ಮೇರೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ಅನುದಾನ ಒದಗಿಸಿದ್ದೆ. ಬಳ್ಳಾರಿ ಅಭಿವೃದ್ಧಿಗೆ ಶ್ರೀರಾಮುಲು ಕೊಡುಗೆ ಶೂನ್ಯ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News