ಜಾಗತಿಕ ಮಟ್ಟದಲ್ಲಿ ಜಾನಪದ ವಿವಿ ಬೆಳೆಸಲು ಸಹಕರಿಸಿ: ಪ್ರೊ.ಬರಗೂರು ರಾಮಚಂದ್ರಪ್ಪ
ಹಾವೇರಿ, ಅ.31: ಜಾಗತಿಕ ಮಟ್ಟದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಬೆಳೆಯಲು ರಾಜ್ಯ ಸರಕಾರವು ಎಲ್ಲ ರೀತಿಯ ನೆರವು ಒದಗಿಸಬೇಕು ಎಂದು ನಾಡೋಜ ಪ್ರೊ.ಬರಗೂರ ರಾಮಚಂದ್ರಪ್ಪ ಕರೆ ನೀಡಿದ್ದಾರೆ.
ಬುಧವಾರ ನಗರದ ಗೊಟಗೋಡಿಯ ಹಿರೇತಿಟ್ಟು ರಂಗ ಬಯಲು ಮಂದಿರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದ ಭಾಷಣ ಅವರು ಮಾಡಿದರು.
ಜಾನಪದ ವಿಶ್ವವಿದ್ಯಾಲಯದ ಬದುಕು, ಬೆಳವಣಿಗೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳ ಭವಿಷ್ಯ ಏನು ಎಂಬ ಅನುಮಾನ ಪ್ರಸ್ತುತ ನನ್ನನ್ನು ಸೇರಿದಂತೆ ಹಲವರನ್ನು ಕಾಡುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
ಜಾನಪದ ವಿಶ್ವವಿದ್ಯಾಲಯ ಆರಂಭಗೊಳ್ಳುವ ಸಂದರ್ಭದಲ್ಲಿದ್ದ ಸಂಭ್ರಮ, ಸಂತೋಷ ಈಗ ಇಲ್ಲದಾಗಿದೆ. ಸ್ಥಳೀಯವಾಗಿ ಜನರಿಂದ ಮಾನ್ಯತೆ ದೊರೆತರೂ ಸರಕಾರದಿಂದ ಸವಲತ್ತುಗಳು, ಸೌಲಭ್ಯಗಳು, ಹಣಕಾಸಿನ ಸೌಕರ್ಯ ದೊರಕುತ್ತಿಲ್ಲ ಎಂಬುದು ವಿಷಾಧಕರ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಈ ವಿವಿಗೆ ಬಿಡುಗಡೆಯಾದ ಅನುದಾನ ಸಂಬಳ ನಿರ್ವಹಣೆಗೆ ಸಾಕಾಗುತ್ತಿಲ್ಲ. ಇನ್ನೂ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ವಿಸ್ತರಣೆ ಹೇಗೆ? ವಿವಿಗೆ ಬೇಕಾದ ಹಣಕಾಸಿನ ನೆರವನ್ನೂ ಸರಕಾರ ನೀಡುತ್ತಿಲ್ಲ. ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ಹೀಗಾದರೆ ಸಂಶೋಧನಾ ಚಟುವಟಿಕೆ, ಶೈಕ್ಷಣಿಕ ಚಟುವಟಿಕೆ, ವಿಸ್ತರಣಾ ಚಟುವಟಿಕೆ ನಡೆಸುವುದು ಹೇಗೆ? ವಿಶ್ವವಿದ್ಯಾಲಯಕ್ಕೆ ಘನತೆ ತರುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ಜಾನಪದ ವಿಶ್ವವಿದ್ಯಾಲಯ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದ ವಿಶ್ವವಿದ್ಯಾಲಯ. ನಮ್ಮ ಸಂಸ್ಕೃತಿ ಪರಂಪರೆಯ ಮೂಲಧಾತು, ಈ ನಾಡಿನ ಕೋಟ್ಯಂತರ ಜನರ ಬೆವರಿನ ಸಂಸ್ಕೃತಿಯ ಪ್ರತಿನಿಧಿಯಾಗಿರುವ ಜಾನಪದ ವಿಶ್ವವಿದ್ಯಾಲಯಕ್ಕೆ ಸರಕಾರ ಆದ್ಯತೆ ನೀಡಬೇಕು. ಅಗತ್ಯವಾದ ಅನುದಾನವನ್ನು ನೀಡಬೇಕು ಎಂದು ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.
ಈ ವಿಶ್ವವಿದ್ಯಾಲಯವನ್ನು ವಿಭಿನ್ನವಾಗಿ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧವಾಗಬೇಕು. ದೂರದರ್ಶಿತ್ವದಿಂದ, ಬದ್ಧತೆಯಿಂದ ವಿವಿಯ ಬೆಳವಣಿಗೆಗೆ ಮುಂದಾಗಬೇಕು. ಜಾಗತಿಕ ಪ್ರಸಿದ್ಧಿಗೆ ಎಲ್ಲ ನೆರವನ್ನು ನೀಡಬೇಕು. ಇಲ್ಲವಾದರೆ ಸರಕಾರ ಸಾರ್ವಜನಿಕರ ಪ್ರತಿರೋಧ ಎದುರಿಸಬೇಕಾಗುತ್ತದೆ. ಈ ಪ್ರತಿರೋಧ ಧ್ವನಿಗೆ ನನ್ನ ಬೆಂಬಲವಿದೆ ಎಂದು ಅವರು ಎಚ್ಚರಿಸಿದರು.
ಜಾಗತಿಕ ಸಂದರ್ಭದಲ್ಲಿ ಮಾರುಕಟ್ಟೆಯ ಮೌಲ್ಯವಾಗಿದೆ. ನಿಜವಾದ ಮೌಲ್ಯಗಳು ಮೂಲೆಸೇರಿವೆ. ನಮ್ಮ ವಿಶ್ವವಿದ್ಯಾಲಯಗಳು ಪ್ರಸ್ತುತ ದಿನಮಾನಗಳಲ್ಲಿ ವಿತ್ತ ವಿಶ್ವವಿದ್ಯಾಲಯಗಳಾಗಿವೆ. ವಾಣಿಜ್ಯ ನೆಲೆಯಲ್ಲಿ ನಮ್ಮ ವಿಶ್ವವಿದ್ಯಾಲಯಗಳು ವ್ಯವಹರಿಸುತ್ತಿವೆ. ಬೇಡಿಕೆ ಇರುವ, ಹಣ ತಂದುಕೊಡುವ ಶೈಕ್ಷಣಿಕ ವಿಷಯಗಳಿಗೆ ಆದ್ಯತೆ ನೀಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೊಟೇಲ್ ಮ್ಯಾನೇಜ್ಮೆಂಟ್, ಆರ್ಕಿಟೆಕ್ಚರ್, ಫ್ಯಾಶನ್ ಡಿಸೈನಿಂಗ್ ಕೋರ್ಸ್‌ಗಳನ್ನು ಆರಂಭಿಸಲು ಆಸಕ್ತಿ ತೋರುತ್ತಿವೆ. ಮೂಲ ವಿಜ್ಞಾನ, ಸಾಮಾಜಿಕ ವಿಜ್ಞಾನ ವಿಷಯಗಳ ಆರಂಭಿಸುವ ಆಸಕ್ತಿ ಇಲ್ಲದಾಗಿದೆ. ಈ ಕಾರಣಕ್ಕಾಗಿ ನಮ್ಮ ಮೂಲ ಸಂಸ್ಕೃತಿಯ ಕಲಿಕೆಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಜಾನಪದ ವಿಶ್ವವಿದ್ಯಾಲಯಕ್ಕೆ ಹೊಸರೂಪ ನೀಡಬೇಕಾಗಿದೆ. ಪಠ್ಯವಿಷಯಗಳನ್ನು ಪುನರ್ ಸಂಯೋಜನೆಯಾಗಬೇಕಿದೆ. ಪದವಿ ಹಂತದಲ್ಲಿ ಜಾನಪದ ವಿಷಯವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಲು ಅಳವಡಿಸಬೇಕು. ಇದರಿಂದ ಜಾನಪದ ವಿಷಯ ಕಲಿತ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗ ಅವಕಾಶಗಳು ದೊರಕುವಂತಾಗುತ್ತವೆ. ನಮ್ಮ ಬದುಕಿನ ಭಾಗವಾದ ಜಾನಪದ ಜ್ಞಾನವು ಉಳಿಯುತ್ತದೆ ಎಂದು ಅವರು ಹೇಳಿದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾತನಾಡಿ, ಜಾನಪದ ವಿಷಯ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಲಿಕೆಯ ಕ್ರಮ ರೂಪಿತವಾಗಬೇಕು. ಶಾಲಾ ಕಾಲೇಜುಗಳಲ್ಲಿ ಜನಪದ ಕಲೆ, ಸಂಸ್ಕೃತಿ, ಜನಪದ ಬದುಕಿನ ಪಠ್ಯಗಳು ಅಳವಡಿಸಬೇಕು ಎಂದು ಮನವಿ ಮಾಡಿಕೊಂಡರು.
ಜಾನಪದ ವಿವಿಯ ಕುಲಪತಿ ಪ್ರೊ.ಡಿ.ಬಿ.ನಾಯಕ್ ಘಟಿಕೋತ್ಸವ ಉದ್ಘಾಟಿಸಿ ಪದವಿ ಪ್ರದಾನ ಮಾಡಿದರು. ಶಿಕ್ಷಣ ಪರಿಷತ್ ಸದಸ್ಯ ಶ್ರೀರಾಮ ಇಟ್ಟಣ್ಣನವರ, ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್.ವೆಂಕಟೇಶ್, ಕುಲಸಚಿವ ಪ್ರೊ.ಚಂದ್ರಶೇಖರ, ಶಾಸಕ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.