×
Ad

ರಾಮನಗರ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

Update: 2018-11-01 10:16 IST

ಬೆಂಗಳೂರು, ನ.1: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನ.3 ರಂದು ನಿಗದಿಯಾಗಿರುವ ಉಪ ಚುನಾವಣೆಯ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಇಂದು ದಿಢೀರನೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ರಾಮನಗರ ಉಪ ಚುನಾವಣೆ ದೊಡ್ಡ ತಿರುವು ಪಡೆದಿದೆ.

ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಚಂದ್ರಶೇಖರ್ ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು.

 ಇಂದು ಸಂಸದ ಡಿಕೆ ಸುರೇಶ್‌ ಜೊತೆ ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್, ‘‘ನಾನು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡುವೆ. ನಾನು ಮೂಲತಃ ಕಾಂಗ್ರೆಸಿಗ. ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನನ್ನ ಕೈಗೆ ಪಕ್ಷದ ಬಾವುಟ ಕೊಟ್ಟು, ಟಿಕೆಟ್ ಕೊಟ್ಟ ಬಳಿಕ ಕೈಗೆ ಸಿಗಲಿಲ್ಲ. ಅಲ್ಲಿ ಎಲ್ಲವೂ ಸರಿಯಿಲ್ಲ’’ ಎಂದು ಹೇಳಿದರು.

''ನಾನು ಬಲಿ ಪಶು ಆಗಿದ್ದೇನೆ. ಬಿಜೆಪಿ ಸಹವಾಸವೇ ಬೇಡ ಎಂದು ನನ್ನ ಮಾತೃ ಪಕ್ಷಕ್ಕೆ ಹಿಂದಿರುಗಿದ್ದೇನೆ. ನನ್ನ ಬೆಂಬಲವನ್ನು ಮೈತ್ರಿ ಅಭ್ಯರ್ಥಿಗೆ ನೀಡುತ್ತೇನೆ. ನನ್ನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ'' ಎಂದು ಚಂದ್ರಶೇಖರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News