ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ನಾವು ಕಾರಣವಲ್ಲ: ಸಿಎಂ ಕುಮಾರಸ್ವಾಮಿ

Update: 2018-11-01 14:22 GMT

ಬೆಂಗಳೂರು, ನ.1: ರಾಮನಗರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ನಾವು ಕಾರಣವಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 63ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬರುವವರನ್ನು ಬಿಜೆಪಿಯವರು ಯಾವ ರೀತಿ ಪರಿಗಣಿಸುತ್ತಾರೆ ಎಂಬುದಕ್ಕೆ ಚಂದ್ರಶೇಖರ್ ಅವರು ಪಕ್ಷದಿಂದ ಹೊರಬಂದಿರುವುದೇ ತಾಜಾ ಉದಾಹರಣೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಇದ್ದ ಆತುರ-ಕಾತುರ ಈಗ ಬಿಜೆಪಿಯಲ್ಲಿ ಕಾಣುತ್ತಿಲ್ಲ ಎಂದರು.

ಬಿಜೆಪಿಯವರು ಮಾಡುವ ಆರೋಪಗಳಿಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ಸದಾನಂದಗೌಡ ಅವರು ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು. 6ನೆ ತಾರೀಖಿನ ನಂತರ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ ಎಂಬ ಬಿಜೆಪಿಯ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ಮಾತ್ರಕ್ಕೆ ಮೈಮರೆತು ಕೂರಬೇಡಿ. ಕೊನೆಯ ಹಂತದಲ್ಲೂ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡೂ ಪಕ್ಷಗಳಿಂದ ಹೆಚ್ಚಿನ ಮತ ಪಡೆಯಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ನಡವಳಿಕೆಯಿಂದಾಗಿ ರಾಮನಗರ ಚುನಾವಣೆ ಅಭ್ಯರ್ಥಿ ಪಕ್ಷದಿಂದ ಹೊರ ಹೋಗಿದ್ದಾರೆ. ನಾವು ಯಾರಿಗೂ ಆಮಿಷವೊಡ್ಡುವ ಅಗತ್ಯವಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ನಾವು ನಾಮಪತ್ರ ಸಲ್ಲಿಸಿದ ನಂತರ ರಾಮನಗರಕ್ಕೆ ಹೋಗಲಿಲ್ಲ. ಮತ ಕೇಳಲಿಲ್ಲ. ರಾಮನಗರದ ಜನರೇ ನಮ್ಮನ್ನು ಆಯ್ಕೆ ಮಾಡಿದ್ದರು. ಕೊನೆ ಉಸಿರಿರುವರೆಗೂ ರಾಮನಗರ ಜನತೆಯನ್ನು ಸ್ಮರಿಸುತ್ತೇನೆ ಎಂದು ಹೇಳಿದರು.

'ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆ ಹಿಂದಿನ ಸರಕಾರದ ಅಧಿಕೃತ ಕಾರ್ಯಕ್ರಮ ಅದನ್ನು ಮುಂದುವರೆಸುತ್ತೇವೆ'
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News