ಅಖಂಡ ಕರ್ನಾಟಕವನ್ನು ಒಡೆಯಬೇಡಿ: ಸಿಎಂ ಕುಮಾರಸ್ವಾಮಿ

Update: 2018-11-01 12:29 GMT

ಬೆಂಗಳೂರು, ನ.1: ಅಖಂಡ ಕರ್ನಾಟಕವನ್ನು ಇಬ್ಭಾಗಿಸಲು ಯತ್ನಿಸುತ್ತಿರುವ ಧ್ವನಿಗಳನ್ನು ಧಿಕ್ಕರಿಸುವ ಕೆಲಸವಾಗಲಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಗುರುವಾರ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 63ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಮತ್ತು ಮಕ್ಕಳ ಮೇಳ-2018 ಹಾಗೂ ಕ್ಷೀರಭಾಗ್ಯ ಯೋಜನೆಯಡಿ ವಿಶೇಷ ಶಾಲೆಗಳ ವಿಕಲಚೇತನ ಮಕ್ಕಳಿಗೆ ಉಚಿತ ಹಾಲು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಅಖಂಡ ಕರ್ನಾಟಕದ ಉಳಿವಿಗಾಗಿ ನಮ ಹಿರಿಕರು ಬಹಳ ಶ್ರಮಿಸಿದ್ದು, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ, ಹಳೆ ಕರ್ನಾಟಕ, ಕರಾವಳಿ ಕರ್ನಾಟಕ ಎಂಬ ಯಾವುದೇ ಭೇದ, ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿರಬೇಕೆಂದು ಕರೆ ನೀಡಿದರು.

ಕನ್ನಡ ಮಾಧ್ಯಮದಲ್ಲಿಯೇ ಓದಿದ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅದೇ ರೀತಿ ಎಲ್ಲ ಸರಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಸಿರ್ಸಿಯ ಮಾರಿಕಾಂಬ ಶಾಲೆಯಂತೆ ಎಲ್ಲ ಸರಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಆಶಿಸಿದರು. ಹಾಗೂ ರಾಜ್ಯದ 30 ಜಿಲ್ಲೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕನ್ನಡ ಸಾರ್ವಭೌಮತ್ವದ ಮೇಲೆ ಇಂಗ್ಲಿಷ್ ಕಲಿಸುವ ನಮ್ಮ ಉದ್ದೇಶ ಕೇವಲ ವ್ಯವಹಾರಿಕ ದೃಷ್ಟಿಗೆ ಮಾತ್ರ ಸೀಮಿತ ಎಂದು ಹೇಳಿದರು. ಕನ್ನಡವೇ ಪ್ರಾಣ ಪದಕ ಎಂದು ನಾವು ಭಾವಿಸಿರುವುದು ನಿಜ. ಆದರೆ, ನಮ್ಮ ಮಕ್ಕಳ ಭವಿಷ್ಯ ದೃಷ್ಟಿಯೂ ನಮಗೆ ಮುಖ್ಯ. ನಮ್ಮ ಮಕ್ಕಳು ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಕೀಳರಿಮೆಯ ಭಾವದಿಂದ ಹೊರಬಂದು ಎಲ್ಲರಂತೆ ಜೀವನ ಎದುರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸುವ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕಲಿಸುವ ಆಶಯಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುವುದನ್ನು ಗಮನಿಸುತ್ತಿದ್ದೇನೆ. ಕನ್ನಡದ ಸಾರ್ವಭೌಮತ್ವದ ಮೇಲೆ ಇಂಗ್ಲಿಷ್ ಸವಾರಿಗೆ ಅವಕಾಶ ನೀಡುವುದಿಲ್ಲ. ಇದು ವ್ಯವಹಾರಿಕ ದೃಷ್ಟಿಗೆ ಮಾತ್ರ ಸೀವಿುತವಾಗಿರುತ್ತದೆ ಎಂದು ಹೇಳಿದರು.

ಜನಪದ ಜಾತ್ರೆಗಳು ನಗರ ಹಾಗೂ ಗ್ರಾಮೀನ ಜನರ ಸಂಸ್ಕೃತಿ ನಡುವೆ ಸೇತುವೆ ಕಟ್ಟಲಿವೆ. ಜತೆಯಲ್ಲಿಯೇ ನಮ್ಮ ಜನಪದ ಕಲಾವಿದರು ಪ್ರತಿಭೆ ಪ್ರದರ್ಶಿಸಲು ಒಂದು ಅತ್ಯುತ್ತಮ ಅವಕಾಶ ಒದಗಿಸಲಿದೆ ಎಂದು ತಿಳಿಸಿದರು.

ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಸಮೃದ್ಧವಾದ ಒಂದು ಸುಂದರ ಕರ್ನಾಟಕ ಕಟ್ಟುವುದು ನನ್ನ ಕನಸು. ಕನಸಿನ ಸಾಕಾರಕ್ಕೆ ದುಡಿಯುವುದು ನನ್ನ ಸಂಕಲ್ಪ. ಹಲವು ವಂಶಗಳು ಕಟ್ಟಿ ಬೆಳೆಸಿದ ಕನ್ನಡ ನಾಡು ತನ್ನದೇ ಆದ ರಾಜಕೀಯ ಅಸ್ಮಿತೆಯನ್ನು ಹೊಂದಿನ ಧನ್ಯಭೂಮಿ. ಈ ನಾಡಿನಲ್ಲಿ ಮೂಡಿ ಬಂದ ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳೆಲ್ಲ ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿದಂತಹ ಕನ್ನಡ ಆಡಳಿತ ವ್ಯವಸ್ಥೆ ರೂಢಿಸಿದ್ದು, ಕರ್ನಾಟಕದ ಹೆಮ್ಮೆ. ಕರ್ನಾಟಕ ಬಹು ಹಿಂದಿನಿಂದಲೂ ಒಂದು ಪ್ರತ್ಯೇಕ ಪ್ರಭಾವಶಾಲಿ ಆಡಳಿತ ಮಂಡಲವಾಗಿ ಉತ್ಕರ್ಷ ಕಂಡಿದೆ ಎಂದರು.

25 ಶತಮಾನಗಳಿಗೂ ಹೆಚ್ಚಿನ ತನ್ನ ಸುದೀರ್ಘ ಚರಿತ್ರೆಯಲ್ಲಿ ಶಕ್ತಿಶಾಲಿಯಾಗಿ ಉಳಿದು ಬಾಳಿ ಬೆಳೆದ ಮನುಕುಲದ ಭರವಸೆಯ ದೀಪ ಎಂಬ ಪ್ರಖ್ಯಾತಿ ಪಡೆದ ಕರ್ನಾಟಕ ಬ್ರಿಟಿಷರ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದು, ನಮ್ಮ ದೌರ್ಭಾಗ್ಯ.ಜನಾಂದೋಲನವೇ ಕರ್ನಾಟಕದ ಏಕೀಕರಣ ಚಳವಳಿ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನ ವೀಕ್ಷಿಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಡ ಧ್ವಜಾರೋಹಣ ನೆರವೇರಿಸಿದರು. ಅಲ್ಲದೆ, ಪೃಥ್ವಿ ಹೆಲ್ತ್ ಕೇರ್ ಫೌಂಡೇಶನ್‌ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಎಚ್‌ಡಿಕೆ ಅವರು ಚಾಲನೆ ನೀಡಿದರು. ಸಮಾರಂಭದಲ್ಲಿ ಸಚಿವೆ ಜಯಮಾಲಾ, ಶಾಸಕ ರೋಷನ್ ಬೇಗ್, ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮುನಿರಾಜು, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಾಫರ್, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News