ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಿಗೆ ಒತ್ತಡ : ಉಗ್ರಪ್ಪ ವಿರುದ್ಧ ಮಹಿಳೆ ಆರೋಪ

Update: 2018-11-01 12:32 GMT

ಬಳ್ಳಾರಿ, ನ.1: ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ರಾಜಿ ಮಾಡಿಕೊಳ್ಳುವಂತೆ ಶಿವಮೊಗ್ಗ ಮೂಲದ ಮಹಿಳೆಯೊಬ್ಬರಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ವಿ.ಎಸ್.ಉಗ್ರಪ್ಪ ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಿಳೆಯೊಬ್ಬರು, ನನ್ನ ಮಗಳ ಮೇಲೆ ಅವರ ಚಿಕ್ಕಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಸಂಬಂಧ ನಾನು ಹೋರಾಟ ಮಾಡುವಾಗ, ಉಗ್ರಪ್ಪ ಅವರ ನೆರವು ಕೋರಲು ಹೋಗಿದ್ದಾಗ ‘ನಮ್ಮ ವ್ಯವಸ್ಥೆ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ’. ನೀವು ರಾಜಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು ಎಂದರು.

ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು. ಆತ ಜೈಲಿನಿಂದ ಹೊರಗೆ ಬರಲು 9 ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೂ, ಆತನಿಗೆ ಜಾಮೀನು ಸಿಕ್ಕಿರಲಿಲ್ಲ. ಈ ಪ್ರಕರಣದ ವಿಚಾರವಾಗಿ ನಾನು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದ ವಿ.ಎಸ್.ಉಗ್ರಪ್ಪರನ್ನು 2016ರಲ್ಲಿ ಭೇಟಿ ಮಾಡಿದ್ದೆ ಎಂದು ಅವರು ಹೇಳಿದರು.

ಆರಂಭದಲ್ಲಿ ಉಗ್ರಪ್ಪ ನನಗೆ ಸಹಾಯ ಮಾಡಿದರು. ಆದರೆ, ನಂತರದ ದಿನಗಳಲ್ಲಿ ಸರಿಯಾದ ಮಾರ್ಗದರ್ಶನ ಮಾಡಿಲ್ಲ. ಇದರಿಂದ ನಾನು ಏಕಾಂಗಿ ಹೋರಾಟ ನಡೆಸುವಂತಾಯಿತು. ಒಂದು ದಿನ ಉಗ್ರಪ್ಪ, ನನ್ನನ್ನು ಬೆಳವಂಗಲ ಬಳಿ ಕರೆದುಕೊಂಡು ಹೋಗಿ, ಈ ಪ್ರಕರಣವನ್ನು ಹಿಂಪಡೆದುಕೊಳ್ಳುವಂತೆ ಅವರು ಬೇಡಿಕೆ ಇಟ್ಟರು ಎಂದು ಮಹಿಳೆ ದೂರಿದರು.

ಅಲ್ಲದೆ, ಹೈಕಮಾಂಡ್‌ನಿಂದ ಸಾಕಷ್ಟು ಒತ್ತಡವಿದೆ. ನೀವು ಈ ಪ್ರಕರಣವನ್ನು ಹಿಂಪಡೆಯಲೇ ಬೇಕು. ನಮ್ಮ ವ್ಯವಸ್ಥೆ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ. ಇನ್ನು ಮುಂದೆ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ನಾನು ಕೇವಲ ಒಬ್ಬ ಪೋಸ್ಟ್‌ಮ್ಯಾನ್ ಅಷ್ಟೇ. ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಉಗ್ರಪ್ಪ ಒತ್ತಡ ಹೇಳಿದ್ದರು ಎಂದು ಮಹಿಳೆ ದೂರಿದರು.

ನ್ಯಾಯಕ್ಕಾಗಿ ನಾನು ಕಳೆದ ಒಂದೂವರೆ ವರ್ಷದಿಂದ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಈಗ ಮಾಧ್ಯಮಗಳ ಎದುರು ಬಂದಿದ್ದೇನೆ. ನನಗೆ ನ್ಯಾಯ ಬೇಕಿದೆ. ಒಂದು ಪುಟ್ಟ ಮಗುವಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಉಗ್ರಪ್ಪ, ಹೇಡಿಯಂತೆ ನಡೆದುಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ವ್ಯಕ್ತಿಯನ್ನು ಬಳ್ಳಾರಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿದ್ದಾರೆ. ಇಂತಹವರನ್ನು ಬಳ್ಳಾರಿ ಜಿಲ್ಲೆಯ ಮತದಾರರು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಬೇಕೇ ? ಮತದಾರರು ಯೋಚನೆ ಮಾಡಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News