×
Ad

ಸಮಗ್ರ ಕರ್ನಾಟಕದ ಅಭಿವೃದ್ಧಿ ಮೈತ್ರಿ ಸರಕಾರದ ಗುರಿ: ಸಚಿವ ಕೆ.ಜೆ.ಜಾರ್ಜ್

Update: 2018-11-01 18:16 IST

ಚಿಕ್ಕಮಗಳೂರು, ನ.1: ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ ಭಂಗಬಾರದಂತೆ ಆಡಳಿತ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ನಾಡಿನಲ್ಲಿ ನಡೆದ ಏಕೀಕರಣ ಚಳವಳಿ ಧೀಮಂತ ಹೋರಾಟಗಾರರ ತ್ಯಾಗದ ಫಲವಾಗಿದ್ದು, ನಾಡಿನ ಅಖಂಡತೆಯ ಸ್ವರೂಪಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ವಿಚ್ಛಿದ್ರಕಾರಿ ಶಕ್ತಿಗಳನ್ನು ಹಮ್ಮೆಟ್ಟಿಸುವಲ್ಲಿ ಕನ್ನಡಿಗರು ಹಾಗೂ  ಮೈತ್ರಿ ಸರಕಾರ ಯಶಸ್ವಿಯಾಗಿದೆ. ಸಮಸ್ತ ಕನ್ನಡ ನಾಡನ್ನು ಸರ್ವತೋಮುಖ ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ದು ದೇಶದ ಪ್ರಗತಿ ಹಾದಿಯಲ್ಲಿ ರಾಜ್ಯವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಬೇಕೆಂಬ ಮಹತ್ವಾಕಾಂಕ್ಷೆಗೆ ಬದ್ಧವಾಗಿ ಮೈತ್ರಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮಾಹಿತಿ, ಜೈವಿಕ ತಂತ್ರಜ್ಞಾನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ನಗರದ ಸುಭಾಷ್‍ಚಂದ್ರ ಭೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಮೈತ್ರಿ ಸರಕಾರ ತನ್ನದೇ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದೆ. ರೈತರ ಸಾಲಮನ್ನಾದಂತಹ ಜನಪರ ಯೋಜನೆ ಸರಕಾರದ ರೈತಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದ್ದು, ಪ್ರತೀ ಕನ್ನಡಿಗನ ಏಳಿಗೆಯೂ ಸರಕಾರದ ಜವಬ್ದಾರಿ ಎಂದು ಭಾವಿಸಿ ಎಲ್ಲ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕದ ಸ್ಥಾನವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸರಕಾರ ಶ್ರಮಿಸುತ್ತಿದೆ ಎಂದ ಅವರು, ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ, ಮೂಲಸೌಕರ್ಯವಲ್ಲ. ಸರ್ವರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ, ಸಾಮಾಜಿಕ ಭದ್ರತೆ ಒದಗಿಸುವುದೇ ಅಭಿವೃದ್ಧಿ. ಇಂತಹ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿ ಸರಕಾರ ಎಲ್ಲ ಜಿಲ್ಲೆಗಳಿಗೂ ತಾರತಮ್ಯ ಮಾಡದೇ ಅನುದಾನ ಒದಗಿಸುತ್ತಿದೆ. ರೈತರ ಸಂಕಷ್ಟಗಳಿಗೆ ದೂರದರಷ್ಟಿಯ ಪರಿಹಾರ ಒದಗಿಸುವುದು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸರಕಾರ ಆದ್ಯತೆ ನೀಡಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಅತೀವೃಷ್ಟಿಯಿಂದ ಜನರ ಬದುಕು ಬಿಗಡಾಯಿಸಿದ್ದರೇ, ಜಿಲ್ಲೆಯ ಬಯಲುಸೀಮೆ ತಾಲೂಕು ವ್ಯಾಪ್ತಿಯಲ್ಲಿ ಬರ ತೀವ್ರವಾಗಿದೆ. ಇದಕ್ಕೆ ರಾಜ್ಯ ಸರಕಾರ ಕಡೂರು ತಾಲೂಕನ್ನು ಬರಪೀಡಿತ ತಾಲೂಕು ಘೋಷಣೆ ಮಾಡಿ, ಸೂಕ್ತ ಅನುದಾನ ಒದಗಿಸಿದೆ. ಮಲೆನಾಡು ಭಾಗದಲ್ಲಾಗಿರುವ ಅತೀವೃಷ್ಟಿಯಿಂದಾದ ಹಾನಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಒದಗಿಸುತ್ತಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಭವಿಷ್ಯದಲ್ಲಿ ರಾಜ್ಯ ಸರಕಾರ ಪ್ರಾಮಾಣಿಕವಾಗಿ ಕೊಡುಗೆಗಳನ್ನು ನೀಡಲಿದೆ ಎಂದರು.

ಮೈತ್ರಿ ಸರಕಾರ ವಿಶೇಷ ಯೋಜನೆಗಳ ಮೂಲಕ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಕಾಯಕ ಯೋಜನೆ ಜಾರಿ ಮಾಡಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಮಹಿಳೆಯರು ಇದರ ಫಲಾನುಭವಿಗಳಿದ್ದಾರೆ. ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಯಶಕಂಡಿದೆ. ಮಾತೃವಂದನಾ ಯೋಜನೆಯಡಿ ಜಿಲ್ಲೆಯಲ್ಲಿ 5090 ಫಲಾನುಭವಿಗಳು ತಲಾ 5000 ರೂ. ಸಹಾಯಧನ ಪಡೆದಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ 2ಲಕ್ಷ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟು 238 ಕೋ. ರೂ. ನೆರವು ನೀಡಲಾಗಿದೆ. ಸಿಎಂ ಗ್ರಾಮ ವಿಕಾಸ ಯೋಜನೆಯಡಿ 27 ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಶೇ.39.16ರಷ್ಟು ಸಾಧನೆ ಮಾಡಲಾಗಿದೆ. ಜಿಪಂ ಕಚೇರಿ ಆಡಳಿತವನ್ನು ಕಾಗದ ರಹಿತವನ್ನಾಗಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾ ಆಟದ ಮೈದಾನದವರೆಗೆ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ನಡೆಯಿತು. ನಂತರ ನಡೆದ ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ, ನಾಡಗೀತೆ, ರೈತಗೀತೆಗಳು ಮೊಳಗಿದವು. ಬಳಿಕ ಜಿಲ್ಲಾ ಪೊಲೀಸ್, ಗೃಹರಕ್ಷಕದಳ, ಎನ್ನೆಸೆಸ್, ಎನ್‍ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತ ಗೈಡ್ಸ್ ವತಿಯಿಂದ ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ ಜರಗಿತು. ಸಚಿವರ ರಾಜ್ಯೋತ್ಸವ ಸಂದೇಶದ ಬಳಿಕ ನಗರದ ವಿವಿಧ ಸರಕಾರಿ, ಖಾಸಗಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಇದೇ ವೇಳೆ ಕನ್ನಡ ಭಾಷಾ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳ ಪೆರೇಡ್‍ನ ನಂತರ ನಡೆದ ಸ್ತಬ್ದ ಚಿತ್ರಗಳ ಪೆರೇಡ್‍ನಲ್ಲಿ ನಾಡಿನ ಸಾಂಸ್ಕøತಿಕ ಪರಂಪರೆ, ಸ್ವಾತಂತ್ರ್ಯ, ಏಕೀಕರಣ ಚಳವಳಿ, ಕಲೆ, ಸಾಹಿತ್ಯ, ಕೃಷಿ ಚಟುವಟಿಕೆ, ಸರಕಾರದ ವಿವಿಧ ಯೋಜನೆಗಳು, ಸಾಮಾಜಿಕ ಪಿಡುಗುಗಳ ನಿವಾರಣೆ ಬಿಂಬಿಸುವ ಆಕರ್ಷಕ ಸ್ತಬ್ದ ಚಿತ್ರಗಳ ಮೆರವಣಿಗೆ ನೋಡುಗರ ಮನಸೂರೆಗೊಂಡವು.

ಶಾಸಕ ಸಿಟಿ ರವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಆನಂದಪ್ಪ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಎಸ್ಪಿ ಹರೀಶ್ ಪಾಂಡೆ, ತಾಪಂ ಅಧ್ಯಕ್ಷ ಜಯಣ್ಣ, ಸಿಇಒ ಸತ್ಯಭಾಮ, ನಗರಸಭೆ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷ ಸುಧೀರ್ ಸೇರಿದಂತೆ ತಾಪಂ, ಜಿಪಂ, ನಗರಸಭೆ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News