ಕನ್ನಡದ ಸವಾಲುಗಳ ಕೆಚ್ಚೆದೆಯಿಂದ ಎದುರಿಸಬೇಕಿದೆ: ತಹಶೀಲ್ದಾರ್ ಸಹನಾ
ಶೃಂಗೇರಿ, ನ.1: ಕನ್ನಡದ ಆಧುನಿಕ ಸವಾಲುಗಳನ್ನು ಕೆಚ್ಚೆದೆಯಿಂದ ಎದುರಿಸಿ ಕನ್ನಡಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಹಂತದಲ್ಲೂ ಕನ್ನಡಿಗರು ಹೋರಾಟ ಮಾಡುವ ಅಗತ್ಯವಿದೆ ಎಂದು ತಹಶೀಲ್ದಾರ್ ಡಾ.ಸಹನಾ.ಎಸ್.ಹಾದಿಮನಿ ತಿಳಿಸಿದರು.
ಪಟ್ಟಣದ ಗಾಂಧಿಮೈದಾನದಲ್ಲಿ ಗುರುವಾರ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ ರಾಜೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಆಂಗ್ಲಮಾಧ್ಯಮದ ವ್ಯಾಮೋಹ ಹೆಚ್ಚಿದ್ದು ಸರ್ಕಾರಿ ಶಾಲೆಗಳು ಹಲವು ಕಡೆ ಮುಚ್ಚುವ ಪರಿಸ್ಥಿತಿ ಒದಗಿ ಬಂದಿದೆ. ಸರ್ಕಾರಿ ಶಾಲೆಗಳು ಕನ್ನಡಭಾಷೆಗೆ ನೀಡುತ್ತಿರುವ ಕೊಡುಗೆ ದೊಡ್ಡದು. ಈ ಹಂತದಲ್ಲಿ ನಾವು ಶಾಲೆಗಳನ್ನು ಉಳಿಸುವ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.
ಡಾ.ವಿ.ಆರ್.ಗೌರಿಶಂಕರ್ ಸಭಾಂಗಣದಲ್ಲಿ ಆಯೋಜಿಸಲಾದ ಸಭಾಕಾರ್ಯಕ್ರಮ ಉದ್ಘಾಟಿಸಿದ ಪ.ಪಂ ಅಧ್ಯಕ್ಷೆ ಶಾರದಾಗೋಪಾಲ್ ಮಾತನಾಡಿ, ಕನ್ನಡಭಾಷೆಯ ಬಗ್ಗೆ ಬದ್ಧತೆಯಿದ್ದರೆ ಮಾತ್ರ ನಾಡು-ನುಡಿಯ ಸಂಸ್ಕøತಿಯ ಏಳಿಗೆ ಸಾಧ್ಯ. ಕನ್ನಡ ಪೂರ್ಣಪ್ರಮಾಣದಲ್ಲಿ ಆಡಳಿತಭಾಷೆಯಾಗಬೇಕು ಎಂದರು.
ಜಿ.ಪಂ ಸದಸ್ಯ ಬಿ.ಶಿವಶಂಕರ್ ಮಾತನಾಡಿ, ಕನ್ನಡಭಾಷೆಯ ನಮ್ಮ ತಾಯಿಭಾಷೆ. ಕನ್ನಡ ಮಾತನಾಡುವರು ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಭಾಷೆ ಮತ್ತು ಸಂಸ್ಕøತಿಯ ಬೆಳವಣಿಗೆ ವಿಚಾರದಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೆ ಸಾಮಾಜಿಕ ಜವಾಬ್ದಾರಿ ಇದೆ ಎಂದರು.
ತಾಲೂಕು ರಾಜ್ಯೋತ್ಸವ ಪ್ರಶಸ್ತಿಯನ್ನು ಕಲಾವಿದ ರಾಘವೇಂದ್ರ ಕಿಗ್ಗಾ ಹಾಗೂ ಗೃಹರಕ್ಷಕದಳ ಇಲಾಖೆ ನಡೆಸಿದ ಪ್ರಥಮ ಚಿಕಿತ್ಸೆ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನಪದಕ ಗಳಿಸಿದ ಎಸ್.ವೀಣಾ ಅವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್ ವಹಿಸಿದರು. ಜಿ.ಪಂ ಸದಸ್ಯೆ ಶಿಲ್ಪಾರವಿ, ತಾ.ಪಂ ಸದಸ್ಯ ಕೆ.ಎಸ್.ರಮೇಶ್, ಪ.ಪಂ ಮುಖ್ಯಾಧಿಕಾರಿ ರವಿಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ರಾಘವೇಂದ್ರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಪ.ಪಂ ಸದಸ್ಯರು ಇದ್ದರು. ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು. ಮುಖ್ಯಬೀದಿಯಲ್ಲಿ ಸಾಗಿಬಂದ ಭುವನೇಶ್ವರಿ ಮೆರವಣಿಗೆಯಲ್ಲಿ ತಾಲೂಕಿನ ವಿದ್ಯಾನಗರ ಶಾಲೆ, ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಶಾಲೆ ಮತ್ತು ಶ್ರೀ ಅಭಿನವವಿದ್ಯಾತೀರ್ಥ ಪ್ರೌಢಶಾಲೆಯ ಸ್ತಬ್ಧಚಿತ್ರಗಳು ಗಮನಸೆಳೆದವು.
ಮಲೆನಾಡಿನಲ್ಲಿ ಹಲವಾರು ಸಾಹಿತಿಗಳು ಇದ್ದರೂ ಕೂಡಾ ಅವರನ್ನು ಪ್ರಶಸ್ತಿಗೆ ಗಣನೆಗೆ ತೆಗೆದುಕೊಳ್ಳದ ಬಗ್ಗೆ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜೋತ್ಸವ ಪೂರ್ವಭಾವಿ ಸಭೆಗೆ ಬಂದ ತಾಲೂಕಿನ ಇಲಾಖೆಗಳ ಅಧಿಕಾರಿಗಳು ರಾಜೋತ್ಸವ ಕಾರ್ಯಕ್ರಮಕ್ಕೆ ಗೈರುಹಾಜರಿ ಆಗಿದ್ದು ಸಭೆಯಲ್ಲಿ ಎದ್ದು ಕಾಣುತ್ತಿತ್ತು.