ರಾಜ್ಯ ಹೈಕೋರ್ಟ್‌ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ
ಬೆಂಗಳೂರು, ನ.1: ರಾಜ್ಯ ಹೈಕೋರ್ಟ್‌ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಸೇವಾ ಹಿರಿತನದ ಮೇಲೆ ಅಶೋಕ್ ಜಿ. ನಿಜಗಣ್ಣನವರ್, ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ್, ಕೃಷ್ಣನ್ ನಟರಾಜನ್, ಪ್ರಹ್ಲಾದ್‌ರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ್, ಅಪ್ಪಾಸಾಹೇಬ್ ಶಾಂತಪ್ಪ ಬೆಳ್ಳುಂಕೆ ಇವರು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡವರು.
ಈ ಪೈಕಿ ಅಶೋಕ್ ನಿಜಗಣ್ಣನವರ್, ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ್ ಮತ್ತು ಕೃಷ್ಣನ್ ನಟರಾಜನ್ ಅವರು 2 ವರ್ಷದ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಅದೇ ರೀತಿ ಸೇವಾ ನಿವೃತ್ತಿ ಅವಧಿ ಕಡಿಮೆ ಇರುವುದರಿಂದ ಪ್ರಲ್ಹಾದ್‌ರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ್ ಅವರು 2020ರ ಫೆ.19 ಹಾಗೂ ಅಪ್ಪಾಸಾಹೇಬ್ ಶಾಂಪಪ್ಪ ಬೆಳ್ಳುಂಕೆ ಅವರು 2019ರ ಆ.2ರವರೆಗೆ ಮಾತ್ರ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಹಾಗಾಗಿ ಈ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿಯೇ ಸೇವಾ ನಿವೃತ್ತಿ ಹೊಂದಲಿದ್ದಾರೆ.
ಹೈಕೋರ್ಟ್‌ಗೆ ಮಂಜೂರಾದ ಒಟ್ಟು ನ್ಯಾಯಮೂರ್ತಿಗಳ ಹುದ್ದೆ 62. ಹಾಲಿ ನ್ಯಾಯಮೂರ್ತಿಗಳ ಸಂಖ್ಯೆ 28. ಈಗ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದಾಗಿ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ ಸದ್ಯ 33ಕ್ಕೆ ಏರಿದೆ. ಈ ಮಧ್ಯೆ ಹೈಕೋರ್ಟ್ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಬೇರೆ ರಾಜ್ಯದ ಹೈಕೋರ್ಟ್‌ಗೆ ವರ್ಗಾವಣೆಯಾಗಲಿದ್ದಾರೆ ಎಂಬ ಮಾತುಗಳು ಹೈಕೋರ್ಟ್ ಕಾರಿಡಾರ್‌ನಲ್ಲಿ ಕೇಳಿ ಬರುತ್ತಿವೆ.