×
Ad

ಬಸ್ ಚಾಲಕನ ಕನ್ನಡಾಭಿಮಾನ : ಕೆಎಸ್ಸಾರ್ಟಿಸಿ ಬಸ್ ತುಂಬಾ ಕನ್ನಡದ ಕಂಪು

Update: 2018-11-01 19:38 IST

ಚಿಕ್ಕಮಗಳೂರು, ನ.1: ಕನ್ನಡ ರಾಜ್ಯೋತ್ಸವವನ್ನು ಗುರುವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದ್ದು, ನಗರದ ಕೆಎಸ್ಸಾರ್ಟಿಸಿ ಬಸ್ ಘಟಕದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಗರಿಕರು ಹಾಗೂ ಕನ್ನಡಾಭಿಮಾನಿಗಳ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಮಾತೃ ಭಾಷೆ ಬೇರೆಯಾಗಿದ್ದರೂ ಚಾಲಕನ ಕನ್ನಡದ ಮೇಲಿನ ಅಭಿಮಾನ ಕಂಡು ಬಸ್ ಪ್ರಯಾಣಿಕರೂ ಸೇರಿದಂತೆ ಸಾರ್ವಜನಿಕರು ಶಹಬ್ಬಾಸ್ ಎನ್ನುತ್ತಿದ್ದ ದೃಶ್ಯ ಕಂಡು ಬಂತು.

ಗುರುವಾರ ನಗರದ ಕೆಎಸ್ಸಾರ್ಟಿಸಿ ಬಸ್ ಆವರಣದಲ್ಲಿ ನಿಂತಿದ್ದ ನೂರಾರು ಬಸ್‍ಗಳ ಪೈಕಿ ಒಂದು ಬಸ್ ಮಾತ್ರ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ವಿಶೇಷವಾಗಿ ಅಲಂಕರಿಸಲಾಗಿದ್ದ ಬಸ್ ಗುರುವಾರ ನಿಲ್ದಾಣದ ಆಕರ್ಷಣೆಯಾಗಿತ್ತು. ಬಸ್‍ನಲ್ಲಿ ನಾಡಿನ ಪ್ರಸಿದ್ಧ ನಾಯಕರು, ಹೋರಾಟಗಾರರು, ಸಾಹಿತಿಗಳೂ, ಕ್ರೀಡಾಪಟುಗಳೂ ಸೇರಿದಂತೆ ಕನ್ನಡ ನಾಡಿನ ರಾಜರು, ಸಂತರು ಒಟ್ಟಾರೆ ಕನ್ನಡದ ಕೀರ್ತಿ ಪತಾಕೆಯನ್ನು ಜಗದಗಲಕ್ಕೆ ಹಾರಿಸದವರಿದ್ದರು. ಬಸ್‍ನ ಮತ್ತೊಂದು ಬದಿಗೆ ಹೋಗಿ ನೋಡಿದವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೊದಲ ಬಸ್‍ನಿಂದ ಹಿಡಿದು ಇಂದಿನ ಕಾಲದ ಆಧುನಿಕ ಬಸ್‍ಗಳು ಕಂಡವು. ಬಸ್‍ನ ಸ್ವಲ್ಪ ಮೇಲೆ ನೋಡಿದವರಿಗೆ ಕರ್ನಾಟಕದ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು ಕಂಡವು.

ಕನ್ನಡ ನಾಡಿನ ಪ್ರವಾಸಿತಾಣಗಳ, ಶಿಲ್ಪಕಲೆಗಳು, ಅರಣ್ಯ ಸಂಪತ್ತು, ಕ್ರೀಡಾಪಟುಗಳು, ಸಾಹಿತಿಗಳು, ಸಾಮಾಜಿಕ ಚಳವಳಿಗಳ ಹೋರಾಟಗಾರರು, ಸಾಧು ಸಂತರು, ಅಧಿಕಾರಿಗಳು, ಸಮಾಜಸೇವಕರೂ ಸೇರದಂತೆ ಕನ್ನಡದ ಕಂಪನ್ನು ವಿಶ್ಚಕ್ಕೆ ಪರಿಸಚಯಸಿದವರ ಭಾವಚಿತ್ರಗಳೂ ಸೇರಿದಂತೆ, ಸಾರಿಗೆ ಸಂಸ್ಥೆ ಬೆಳೆದು ಬಂದ ಹಾದಿ, ಸಂಸ್ಥೆಯ ಮೊದಲ ಹಾಗೂ ಹಿಂದಿನ ಕಾಲದ ಸಾರಿಗೆ ಬಸ್‍ಗಳೂ ಸೇರಿದಂತೆ ನಾಡಿನ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವ ಭಾವಚಿತ್ರಗಳು, ಮಾಹಿತಿಗಳನ್ನು ಬಸ್‍ನ ಹೊರಭಾಗ, ಒಳಬಾಗದಲ್ಲಿ ಪ್ರದರ್ಶಿಸುತ್ತಾ ಕನ್ನಡದ ಥೇರೆಂಬಂತೆ ಭಾಸವಾಗುತ್ತಿದ್ದ ಬಸ್ ಸಾರ್ವಜನಿಕರ ಗಮನಸೆಳೆಯಿತು.

ಬಸ್‍ಗೆ ಹೀಗೆ ಕನ್ನಡ ಥೇರಿನ ರೂಪ ನೀಡಿದವರು ಚಿಕ್ಕಮಗಳೂರು ಸಾರಿಗೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಚಾಲಕ ಹೀಗೆ ಬಸ್ ಅನ್ನು ಸಿಂಗರಿಸಿ, ಕನ್ನಡಾಭಿಮಾನ ಮೆರೆಯುತ್ತಾ ಸಾರ್ವಜನಿಕರು ಮತ್ತು ಪ್ರಯಾಣಿಕರಲ್ಲಿ ಕನ್ನಡ ನಾಡಿನ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ. 

ಕನ್ನಡ ಮತ್ತು ಕನ್ನಡ ನಾಡಿನ ಮೇಲಿನ ಅಪಾರ ಅಭಿಮಾನದಿಂದ ಈ ಕೆಲಸಕ್ಕೆ ಮುಂದಾಗಿರುವವರು ಚಿಕ್ಕಮಗಳೂರು ಸಾರಿಗೆ ಬಸ್ ಚಾಲಕ ಮುಹಮ್ಮದ್ ಅಲ್ತಾಫ್. ವೃತ್ತಿಯಿಂದ ಚಾಲಕ ಹಾಗೂ ನಿರ್ವಾಹಕರಾಗಿದ್ದರೂ ಅಪಾರ ಕನ್ನಡಾಭಿಮಾನ ಹೊಂದಿರುವ ಇವರು ಪ್ರತೀ ವರ್ಷ ಕನ್ನಡ ರಾಜ್ಯೋತ್ಸವದ ವೇಳೆ ವಿಭಿನ್ನ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮೂಲಕ ಸಾರ್ವಜನಿಕರು ಮತ್ತು ಪ್ರಯಾಣಿಕರಲ್ಲಿ ಕನ್ನಡದ ಬಗ್ಗೆ ಜಾಗೃತಿ, ಆಸಕ್ತಿ ಮೂಡಿಸುವ ಕೈಂಕರ್ಯ ಮಾಡುತ್ತಾರೆ. ಗುರುವಾರ ನಡೆದ ರಾಜ್ಯೋತ್ಸವನ್ನು ಅವರು ತಾವು ಚಲಾಯಿಸುವ ಬಸ್ ಗೆ ಕನ್ನಡ ಥೇರಿನ ರೂಪ ನೀಡಿ ಸಾರ್ವಜನಿಕರ ಪ್ರಶಂಸೆಗಳಿಸಿದ್ದಾರೆ. ಇವರ ಈ ಕನ್ನಡಾಭಿಮಾನಕ್ಕೆ ಘಟಕದ ಇತರ ಚಾಲಕರು, ನಿರ್ವಾಹಕರು ಮತ್ತು ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ.

ಕನ್ನಡ ಭಾಷೆ ಎಲ್ಲ ಭಾಷೆಗಿಂತಲೂ ಶ್ರೇಷ್ಟವಾಗಿದೆ. ಕನ್ನಡ ನಾಡು ವೈವಿಧ್ಯತೆಯ ಬೀಡು ಇಲ್ಲಿನವರು ಕನ್ನಡ ಭಾಷೆಯಲ್ಲೇ ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆ ಸಾಧನೆಗಳ ತೊಟ್ಟಿಲು. ಕನ್ನಡ ನಾಡಿನಲ್ಲಿ ಹುಟ್ಟಿದವರು ಯಾವ ಮತ, ಜಾತಿ, ಧರ್ಮದವರಾಗಿದ್ದರೂ ಕನ್ನಡವನ್ನು ಪ್ರೀತಿಸಬೇಕು. ಆಧುನಿಕತೆಯಿಂದಾಗಿ ಯುವ ಜನತೆ ಕನ್ನಡವನ್ನು ಮರೆಯುತ್ತಿದ್ದಾರೆ. ಈ ಕಾರಣಕ್ಕಾಗಿ ರಾಜ್ಯೋತ್ಸವದ ದಿನದಂತು ತಾನು ಕನ್ನಡಕ್ಕಾಗಿ ಅಳಿಲು ಸೇವೇ ಮಾಡುತ್ತಿದ್ದೇನೆ. ನನ್ನ ಈ ಸಣ್ಣ ಕೆಲಸಸಕ್ಕೆ ಇಲಾಖೆಯಿಂದ ಸಂಪೂರ್ಣ ಸಹಕಾರ ದೊರೆಯುತ್ತಿದೆ.
- ಮುಹಮ್ಮದ್ ಅಲ್ತಾಫ್, ಕನ್ನಡಾಭಿಮಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News