ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಬಿ.ಶ್ರೀರಾಮುಲು

Update: 2018-11-01 14:11 GMT

ಬಳ್ಳಾರಿ, ನ. 1: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಮೇಲೆ ಒತ್ತಡ ಹೇರಿ ಕಣದಿಂದ ಹಿಂದೆ ಸರಿಯುವಂತೆ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆಂದು ಶಾಸಕ ಬಿ.ಶ್ರೀರಾಮುಲು ದೂರಿದ್ದಾರೆ.

ಗುರುವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಸ್ಪರ್ಧಿಯೇ ಇಲ್ಲದಂತೆ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಜಾಪ್ರಭುತ್ವದ ವಿರೋಧಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾಜಿ ಸಿಎಂ ಸಿದ್ದರಾಮಯ್ಯನವರಷ್ಟು ಬುದ್ದಿವಂತನಲ್ಲ. ತಾನು ದಡ್ಡ ಎಂಬುದನ್ನು ಒಪ್ಪಿಕೊಳ್ಳುವೆ. ಪ್ರತೀ ಹದಿಮೂರು ಕಿ.ಮೀ.ಗೆ ಭಾಷೆ ಬಳಕೆ ಶೈಲಿ ಬದಲಾಗುತ್ತದೆ ಎಂದ ಶ್ರೀರಾಮುಲು, ನನ್ನದು ಗ್ರಾಮೀಣ ಜನರ ಭಾಷೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಬಳ್ಳಾರಿ ಮತ್ತು ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ರಾಜೀನಾಮೆ ನೀಡಿದ್ದ ಸೋನಿಯಾ ಗಾಂಧಿ ಇದುವರೆಗೆ ಬಳ್ಳಾರಿಯ ಮುಖವನ್ನೇ ನೋಡಿಲ್ಲ ಎಂಬುದನ್ನು ಬಳ್ಳಾರಿ ಜನತೆ ಮರೆತಿಲ್ಲ ಎಂದ ರಾಮುಲು, ಜಿಲ್ಲೆಯ ಅಭಿವೃದ್ಧಿಗೆ ಘೋಷಿಸಿದ್ದ 3 ಸಾವಿರ ಕೋಟಿ ರೂ. ಇನ್ನೂ ಬಂದಿಲ್ಲ ಎಂದು ಟೀಕಿಸಿದರು.

ಹೈ.ಕ.ದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಲ್ಲಿ 500ಕೋಟಿ ರೂ.ಕಡಿತಗೊಳಿಸಲಾಗಿದೆ. ಹಿಂದುಳಿದ ಜಿಲ್ಲೆಗಳಿಗೆ ಮೀಸಲಿಡಬೇಕಿದ್ದ ಅನುದಾನವನ್ನು ನೀಡದೆ ತಾರತಮ್ಯ ಮಾಡಲಾಗಿದೆ ಎಂದು ದೂರಿದ ಅವರು, ಹಿಂದಿನ ಸರಕಾರ ಎಲ್ಲ ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಸಿದೆ ಎಂದು ಟೀಕಿಸಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರ ಗೆದ್ದರೆ ಕರ್ನಾಟಕವನ್ನೇ ಗೆದ್ದಂತೆ ಎಂದು ಭಾವಿಸಿರುವ ಮೈತ್ರಿ ಸರಕಾರ ತನ್ನ ಎಲ್ಲ ಸಚಿವರು, ಮಾಜಿ ಸಚಿವರು, ಶಾಸಕರನ್ನು ಕರೆತಂದಿದೆ. ಆದರೆ, ಸೋಲಿನ ಭಯ ಮಾತ್ರ ಹೋಗಿಲ್ಲ ಎಂದ ಶ್ರೀರಾಮುಲು, ಜಿಲ್ಲೆಯ ಜನರನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ. ಬಳ್ಳಾರಿ ಮನೆ ಮಗಳು ಜೆ.ಶಾಂತಾ ಅವರನ್ನು ಜಿಲ್ಲೆಯ ಜನತೆ ಮತ್ತೊಮ್ಮೆ ಆಯ್ಕೆ ಮಾಡುವ ಭರವಸೆ ಇದೆ ಎಂದು ರಾಮುಲು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ, ಮಾಜಿ ಸಚಿವ ಸೋಮಣ್ಣ, ಶಾಸಕ ಜಿ.ಸೋಮಶೇಖರ ರೆಡ್ಡಿ, ಪರಿಷತ್ ಸದಸ್ಯ ಎನ್.ರವಿಕುಮಾರ್, ಸಂಸದ ಕರಡಿ ಸಂಗಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News