‘ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ’ ಸಂಘಟನೆಗೆ ಚಾಲನೆ: ಮೌಲಾನ ತನ್ವೀರ್ ಹಾಶ್ಮಿ
ಬೆಂಗಳೂರು, ನ.1: ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯ ಮಾರ್ಗದರ್ಶನ ಕಂಡುಕೊಳ್ಳುವ ಹಾಗೂ ನಮ್ಮಲ್ಲಿ ಒಗ್ಗಟ್ಟನ್ನು ಮೂಡಿಸುವ ಉದ್ದೇಶದಿಂದ ‘ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ’ ಸಂಘಟನೆಯನ್ನು ರಚಿಸಿದ್ದೇವೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಮೌಲಾನ ತನ್ವೀರ್ ಹಾಶ್ಮಿ ತಿಳಿಸಿದರು.
ಗುರುವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಕಚೇರಿಯಲ್ಲಿ ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉಲೇಮಾಗಳು, ಧಾರ್ಮಿಕ ಚಿಂತಕರನ್ನು ಒಳಗೊಂಡ ವೇದಿಕೆ ಇದಾಗಲಿದೆ. ನಮ್ಮಲ್ಲಿರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು, ಸಮುದಾಯದ ಒಳಿತಿಗಾಗಿ ಶ್ರಮಿಸಲು ನಾವು ಒಂದಾಗಬೇಕಿದೆ. ಸಮಾಜದಲ್ಲಿರುವ ಹಲವಾರು ಕೆಡಕುಗಳನ್ನು ದೂರ ಮಾಡಬೇಕಿದೆ ಎಂದು ಅವರು ಹೇಳಿದರು.
ಈ ಸಂಘಟನೆಯಲ್ಲಿ ದ್ವೇಷಕ್ಕೆ ಸ್ಥಳವಿಲ್ಲ. ಪ್ರೀತಿ, ಸಹೋದರತೆಯನ್ನು ಹರಡಿಸುವುದು ನಮ್ಮ ಉದ್ದೇಶ. ಶಿಕ್ಷಣ, ಸಾಮಾಜಿಕ ಸುಧಾರಣೆ, ಬಡತನ ನಿರ್ಮೂಲನೆಗೆ ನಾವು ಆದ್ಯತೆ ನೀಡಲಿದ್ದೇವೆ. ಇದಕ್ಕಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ ಎಂದು ಅವರು ಕರೆ ನೀಡಿದರು.
ಮೀಲಾದ್ದುನ್ನಬಿಯನ್ನು ವಿಶ್ವ ಶಾಂತಿ ದಿನಾಚರಣೆ ಯನ್ನಾಗಿ ಆಚರಿಸಲು ನಾವು ಕರೆ ನೀಡುತ್ತಿದ್ದೇವೆ. ಪ್ರವಾದಿ ಮುಹಮ್ಮದ್(ಸ) ಅವರ ಮಾರ್ಗದರ್ಶನದಂತೆ ನಾವು ಮುಂದುವರೆಯಲು ನಮ್ಮ ಸಂಘಟನೆಯಲ್ಲಿ ಶರೀಅತ್ ಸಮಿತಿಯನ್ನು ರಚನೆ ಮಾಡುತ್ತೇವೆ ಎಂದು ಮೌಲಾನ ತನ್ವೀರ್ ಹಾಶ್ಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಖಾಝಿ ಶಂಶುದ್ದೀನ್, ಮೌಲಾನ ಗುಲಾಮ್ ಗೌಸ್ ಅಶ್ರಫಿ, ಮುಫ್ತಿ ಮುಹಮ್ಮದ್ ಅಲಿ ಮಿಸ್ಬಾಹಿ, ನಿಯಾಝ್ ಆಲಂ, ಹಸ್ನಾನ್ ಆಬಿದಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.