ರಾಷ್ಟ್ರಸೇವೆಯ ಹೆಸರಿನಲ್ಲಿ ‘ರುಪೇ’ ಬಳಕೆಗೆ ಮೋದಿ ಬೆಂಬಲ: ಅಮೆರಿಕಾ ಸರಕಾರಕ್ಕೆ ದೂರು ನೀಡಿದ್ದ ಮಾಸ್ಟರ್ ಕಾರ್ಡ್

Update: 2018-11-02 09:00 GMT

ಹೊಸದಿಲ್ಲಿ, ನ.2: ದೇಶೀಯ ಪೇಮೆಂಟ್ಸ್ ನೆಟ್‍ವರ್ಕ್ ‘ರುಪೇ’ ಬಳಕೆಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯವಾದವನ್ನು ಬಳಸಿಕೊಂಡಿದ್ದಾರೆಂದು ವಿಶ್ವದ ಎರಡನೇ ಅತಿ ದೊಡ್ಡ ಪೇಮೆಂಟ್ಸ್ ಪ್ರೊಸೆಸರ್ ‘ಮಾಸ್ಟರ್ ಕಾರ್ಡ್’ ಜೂನ್ ತಿಂಗಳಲ್ಲಿ ಅಮೆರಿಕಾ ಸರಕಾರಕ್ಕೆ ದೂರು ನೀಡಿತ್ತೆಂದು ತಿಳಿದು ಬಂದಿದೆ.

ಮೋದಿ ಸರಕಾರದ `ರಕ್ಷಣಾತ್ಮಕ ನೀತಿಗಳೂ' ವಿದೇಶಿ ಪೇಮೆಂಟ್ ಕಂಪೆನಿಗಳನ್ನು ಬಾಧಿಸಿದೆಯೆಂದು ಮಾಸ್ಟರ್ ಕಾರ್ಡ್ ತನ್ನ ದೂರಿನಲ್ಲಿ ತಿಳಿಸಿತ್ತೆಂದು ವರದಿಯಾಗಿದೆ.

‘ರುಪೇ’ ಬಳಕೆಯನ್ನು ಭಾರತ ಸರಕಾರ ಉತ್ತೇಜಿಸುತ್ತಿರುವುದರಿಂದ ಅಮೆರಿಕಾದ ಪೇಮೆಂಟ್ಸ್ ಕಂಪೆನಿಗಳಾದ ‘ಮಾಸ್ಟರ್ ಕಾರ್ಡ್’ ಮತ್ತು ವೀಸಾ ಬಹಳಷ್ಟು ತೊಂದರೆಗೊಳಗಾಗಿವೆಯೆನ್ನಲಾಗಿದೆ. ಈಗ ಭಾರತದ ಸುಮಾರು 100 ಕೋಟಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಪೈಕಿ ಅರ್ಧದಷ್ಟು ‘ರುಪೇ’ ಪೇಮೆಂಟ್ಸ್ ಸಿಸ್ಟಂ ಮೂಲಕವೇ ಸಾಗುತ್ತಿದೆ.

ರುಪೇ ಕಾರ್ಡ್‍ ಬಳಕೆಯನ್ನು ಪ್ರಧಾನಿ ಮೋದಿ ಸಾರ್ವಜನಿಕವಾಗಿ  ಬೆಂಬಲಿಸಿದ್ದಾರೆ ಹಾಗೂ ಅವುಗಳ ಬಳಕೆಯಿಂದ ವಹಿವಾಟು ಶುಲ್ಕವು ಭಾರತದಲ್ಲೇ ಉಳಿಯುವುದರಿಂದ ಇದು ದೇಶ ಸೇವೆ ಮಾಡಿದ ಹಾಗೆ ಹಾಗೂ ಈ ಶುಲ್ಕ ಭಾರತದಲ್ಲಿ ರಸ್ತೆ, ಶಾಲೆ ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರಿ ಎಂದು ಹೇಳಿದ್ದಾರೆಂದು ಮಾಸ್ಟರ್ ಕಾರ್ಡ್ ಹೇಳಿದೆಯೆನ್ನಲಾಗಿದೆ. ಆದರೆ ವಹಿವಾಟು ಶುಲ್ಕದ ಶೇ.15ರಿಂದ ಶೇ.20ರಷ್ಟು ಮಾತ್ರ  ಕಂಪೆನಿಗೆ ದೊರೆಯುತ್ತದೆ ಹಾಗೂ ಉಳಿದ ಮೊತ್ತ ಭಾರತದಲ್ಲಿಯೇ ಉಳಿಯುತ್ತದೆ ಎಂದು ಕಂಪೆನಿ ಕೆಲ ಸಮಯದ ಹಿಂದೆ ಸ್ಪಷ್ಟೀಕರಣ ನೀಡಿತ್ತು.

ಮಾಸ್ಟರ್ ಕಾರ್ಡ್ ಸಂಸ್ಥೆಯ ಗ್ಲೋಬಲ್ ಪಬ್ಲಿಕ್ ಪಾಲಿಸಿ ಉಪಾಧ್ಯಕ್ಷೆ ಸಹ್ರಾ ಇಂಗ್ಲಿಷ್ ಅವರು ಅಮೆರಿಕಾದ ಟ್ರೇಡ್ ರೆಪ್ರಸೆಂಟೇಟಿವ್( ಯುಎಸ್‍ಟಿಆರ್) ಇದಕ್ಕೆ ಜೂನ್ 21ರಂದು ಕಳುಹಿಸಿದ ವರದಿಯಲ್ಲಿ ``ಪ್ರಧಾನಿ ಮೋದಿ ರುಪೇ ಕಾರ್ಡುಗಳನ್ನು ರಾಷ್ಟ್ರೀಯವಾದದ ಜತೆ ಥಳಕು ಹಾಕಿ ಇದು ಒಂದು ವಿಧದಲ್ಲಿ ರಾಷ್ಟ್ರ ಸೇವೆಯಂತೆ ಎಂದಿದ್ದಾರೆ'' ಎಂದು ತಿಳಿಸಿದೆ. ``ಪ್ರಧಾನಿ ಮೋದಿಯ ಡಿಜಿಟಿಲ್ ಪೇಮೆಂಟ್ಸ್ ಉತ್ತೇಜನ ಸ್ತುತ್ಯರ್ಹವಾದರೂ  ಸರಕಾರದ ಕೆಲವೊಂದು ಕ್ರಮಗಳು ಜಾಗತಿಕ ಕಂಪೆನಿಗಳಿಗೆ ಅನಾನುಕೂಲವುಂಟು ಮಾಡಿದೆ,'' ಎಂದು ಮಾಸ್ಟರ್ ಕಾರ್ಡ್ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News