ಚನ್ನಗಿರಿ: ರೈತನ ಮೇಲೆ ಕರಡಿ ದಾಳಿ
ಚನ್ನಗಿರಿ.ನ,2: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ತಾಲೂಕಿನ ಬಸವಾಪಟ್ಟಣ ಹೋಬಳಿಯ ಯೋಲದಹಳ್ಳಿ ಸಮೀಪ ಶುಕ್ರವಾರ ಸಂಭವಿಸಿದೆ.
ಯಲೋದಹಳ್ಳಿ ಗ್ರಾಮದ ರೈತ ತಿಪ್ಪೇಶಪ್ಪ (65) ಕರಡಿ ದಾಳಿಗೊಳಗಾದ ವ್ಯಕ್ತಿ. ತಿಪ್ಪೇಶಪ್ಪ ಸಮೀಪದ ನೇರಲಗುಂಡಿ ಗ್ರಾಮದ ಹೊಲದಲ್ಲಿ ಶುಕ್ರವಾರ ಬೆಳಗ್ಗೆ ರಾಗಿ ಕೊಯ್ಯಲು ತೆರಳಿದ್ದರು. ಈ ವೇಳೆ ಎರಡು ಕರಡಿಗಳು ಏಕಾಏಕಿ ತಿಪ್ಪೇಶಪ್ಪರ ಮೇಲೆ ದಾಳಿ ಮಾಡಿವೆ. ಆಗ ಅಲ್ಲಿಯೇ ಇದ್ದ ಮೂವರು ರೈತ ಕೂಲಿ ಕಾರ್ಮಿಕರು ರಕ್ಷಣೆಗೆ ಧಾವಿಸಿದ್ದಾರೆ.
ಅಷ್ಟರಲ್ಲಾಗಲೇ, ಕರಡಿಗಳು ತಿಪ್ಪೇಶಪ್ಪರ ಮೇಲೆರಗಿ ಮೈ, ಹೊಟ್ಟೆ, ತಲೆ, ತೋಳು, ಕಾಲುಗಳಿಗೆ ತೀವ್ರ ಗಾಯ ಮಾಡಿದ್ದು, ಎಡ ಭಾಗದ ಕಿವಿ ಕಚ್ಚಿ ಗುಡ್ಡದ ಕಡೆಗೆ ಓಡಿ ಹೋಗಿವೆ. ತಕ್ಷಣವೇ ಗಾಯಾಳು ತಿಪ್ಪೇಶಪ್ಪರನ್ನು ಸಮೀಪದ ಬಸವಾಪಟ್ಟಣ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.