ಅಯೋಧ್ಯೆ ವಿವಾದ ಬಗೆಹರಿಸುವ ಇಚ್ಛಾಶಕ್ತಿ ಬಿಜೆಪಿಗಿಲ್ಲ: ಸಿ.ಎಂ ಇಬ್ರಾಹಿಂ
ಹುಬ್ಬಳ್ಳಿ, ನ.2: ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಛಾಶಕ್ತಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ವಿಚಾರವನ್ನೆ ಮುಂದಿಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಈ ಹಿಂದೆ ಬಿಜೆಪಿ ನಾಯಕರು ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದರು. ಗುಡಿ ಮತ್ತು ಮಸೀದಿಗಳನ್ನು ಕಟ್ಟುವುದು ಧರ್ಮವಲ್ಲ ಎಂದರು.
ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಗೋವುಗಳಿಗೆ ಪೂಜೆ ಮಾಡುತ್ತಾರೆ. ಆದರೆ, ಅದೇ ಬಿಜೆಪಿಯ ಸರಕಾರವಿರುವ ಗೋವಾದಲ್ಲಿ ಗೋವುಗಳಿಗೆ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಈಗಿನ ರಾಜಕೀಯ ಪರಿಸ್ಥಿತಿಯು ಅತ್ಯಂತ ಕೀಳುಮಟ್ಟಕ್ಕೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗೋಮಾಂಸ ರಫ್ತು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಗೋವುಗಳನ್ನು ಕತ್ತರಿಸುವ ಹಲವಾರು ಕಂಪೆನಿಗಳು ಬಿಜೆಪಿ ಮುಖಂಡರ ಮಾಲಕತ್ವದ್ದಾಗಿವೆ ಎಂದು ಇಬ್ರಾಹೀಂ ಆರೋಪಿಸಿದರು.
2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ. ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಮೈತ್ರಿ ಪಕ್ಷಗಳೇ ಗೆಲುವು ಸಾಧಿಸಲಿವೆ. ರಾಮನಗರದಲ್ಲಿ ಬಿಜೆಪಿ ಇಲ್ಲವೇ ಇಲ್ಲ ಎಂದು ಇಬ್ರಾಹೀಂ ವ್ಯಂಗ್ಯವಾಡಿದ ಅವರು, ನರೇಂದ್ರ ಮೋದಿಗೆ ರಾಮ ಮಂದಿರದ ಬದಲು ಸಾಬರ ಹೆಂಡತಿಯರ ಚಿಂತೆ ಹೆಚ್ಚಿದೆ. ನರೇಂದ್ರಮೋದಿ ತಮ್ಮ ಪತ್ನಿಗೆ ಜೀವನಾಂಶ ಕೊಡುತ್ತಿದ್ದಾರಾ ಎಂದು ಪ್ರಶ್ನಿಸಿದರು.