ಸ್ಪೇನ್ ನಲ್ಲಿ ವಿಶ್ವ ಕೆಡೆಟ್ ಚೆಸ್ ಪಂದ್ಯಾವಳಿ: ಭಾರತವನ್ನು ಪ್ರತಿನಿಧಿಸಲಿರುವ ಮಂಡ್ಯದ ಬಾಲಕಿಯರು
ಮಂಡ್ಯ, ನ.2: ಸ್ಪ್ಯಾನಿಷ್ ಚೆಸ್ ಫೆಡರೇಶನ್ ಹಾಗೂ ವಿಶ್ವ ಚೆಸ್ ಸಂಸ್ಥೆ (ಫಿಡೆ) ಸಹಯೋಗದಲ್ಲಿ ಸ್ಪೇನ್ ದೇಶದ ಸ್ಯಾಂಟಿಯಾಗೊ ನಗರದಲ್ಲಿ ನ.3ರಿಂದ 15 ರವರೆಗೆ ಆಯೋಜಿಸಿರುವ ವಿಶ್ವ ಕೆಡೆಟ್ ಚೆಸ್ ಪಂದ್ಯಾವಳಿಯಲ್ಲಿ ಭಾರತವನ್ನು ಮಂಡ್ಯದ ಬಾಲಕಿಯರಿಬ್ಬರು ಪ್ರತಿನಿಧಿಸಲಿದ್ದಾರೆ.
ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ತನಿಷ್ಕಾ ಜೈನ್ (7) ಎಂಟು ವರ್ಷದ ಬಾಲಕಿಯರ ವಿಭಾಗ ಹಾಗೂ ಚೆಸ್ ಶೂಟ್ಸ್ ನಲ್ಲಿ ತರಬೇತಿ ಪಡೆಯುತ್ತಿರುವ ಶಿಫಾಲಿ ಎ.ಎನ್.(9) ಹತ್ತು ವರ್ಷದೊಳಗಿನ ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಎಂಟು ವರ್ಷದ ವಿಭಾಗದ ಪಂದ್ಯಾವಳಿಯಲ್ಲಿ ವಿವಿಧ ದೇಶಗಳ ಸುಮಾರು 86 ಸ್ಪರ್ಧಿಗಳು ಹಾಗೂ ಹತ್ತು ವರ್ಷದ ವಿಭಾಗದಲ್ಲಿ 118 ಸ್ಪರ್ಧಿಗಳು ಹನ್ನೊಂದು ಸುತ್ತುಗಳ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ತನಿಷ್ಕಾ ಜೈನ್ ಜೊತೆಯಲ್ಲಿ ಈಕೆಯ ತಂದೆ ಹಾಗೂ ಚೆಸ್ ತರಬೇತಿಯಲ್ಲಿ 'ಫಿಡೆ' ಪ್ರಮಾಣ ಪತ್ರ ಹೊಂದಿರುವ ಮಂಜುನಾಥ್ ಜೈನ್ ತೆರಳುತ್ತಿದ್ದಾರೆ. ಈ ವಿಶ್ವ ಪಂದ್ಯಾವಳಿಯಲ್ಲಿ ತನಿಷ್ಕಾ ಜೈನ್ ಹಾಗು ಶಿಫಾಲಿ ಉತ್ತಮ ಸಾಧನೆ ಮಾಡಿ ಪದಕ ಗೆಲ್ಲಲಿ ಎಂದು ಮಂಡ್ಯ ಜಿಲ್ಲಾ ಚೆಸ್ ಸಂಸ್ಥೆ ಅಧ್ಯಕ್ಷ ಟಿ.ವರಪ್ರಸಾದ್ ಶುಭ ಹಾರೈಸಿದ್ದಾರೆ.