ಬೆಂಗಳೂರು: ಬೃಹತ್ ಮಾದಕ ವಸ್ತು ಮಾರಾಟ ಜಾಲ ಪತ್ತೆ; 1.5 ಕೋಟಿ ಮೌಲ್ಯದ ವಸ್ತು ಜಪ್ತಿ

Update: 2018-11-02 16:26 GMT

ಬೆಂಗಳೂರು, ನ.2: ಮಾದಕ ವಸ್ತು ಮಾರಾಟದ ಬೃಹತ್ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಕೊಕೇನ್ ಸೇರಿದಂತೆ ಒಟ್ಟು 1.5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಶುಕ್ರವಾರ ಈ ಪ್ರಕರಣ ಸಂಬಂಧ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ನಗರದ ಕಾಚರಕನಹಳ್ಳಿ, 3 ನೇ ಕ್ರಾಸ್ ರಸ್ತೆಯಲ್ಲಿರುವ ಮನೆ ನಂ. 25 ರಲ್ಲಿ ವಾಸವಿದ್ದುಕೊಂಡು ಮಾದಕ ವಸ್ತುಗಳನ್ನು ಸಂಗ್ರಹಣೆ ಮಾಡಿಟ್ಟುಕೊಂಡಿದ್ದ ಆಫ್ರಿಕಾ ಪ್ರಜೆಗಳಾದ ಫೆತ್ ಚೌಕ್ಸ್ (34), ಕ್ಯಾಂಟೆ ಹೆನ್ರಿ(28) ಹಾಗೂ ಮಂಗಳೂರು ಮೂಲದ ಪ್ರತೀಕ್ ಶೆಟ್ಟಿ (29) ಬಂಧಿತ ಆರೋಪಿಗಳೆಂದು ತಿಳಿಸಿದರು.

ಎಷ್ಟು ಜಪ್ತಿ?: 1.2 ಕೋಟಿ ಮೌಲ್ಯದ 1.5 ಕೆ.ಜಿ. ಕೊಕೇನ್, 20.35 ಲಕ್ಷ ರೂ. ಮೌಲ್ಯದ 1,350 ಎಕ್ಸ್‌ಟೆಸಿ ಮಾತ್ರೆಗಳು (ಕಂದು ಬಣ್ಣ), 8.7 ಲಕ್ಷದ 580 ಎಕ್ಸ್‌ಟೆಸಿ ಮಾತ್ರೆಗಳು (ಕಡು ನೇರಳೆ ಬಣ್ಣ), ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಹಾಗೂ 6 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿದೇಶಿ ಪ್ರಜೆಗಳಾದ ಆರೋಪಿಗಳು, ವೀಸಾ ನಿಯಮ ಉಲ್ಲಂಘಿಸಿದ್ದರು. ಅಷ್ಟೇ ಅಲ್ಲದೆ, ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.

ಮಂಗಳೂರು ಮೂಲಕದ ಪ್ರತೀಕ್ ಶೆಟ್ಟಿ, ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರೂ, ಮೋಜು ಮಸ್ತಿಗಾಗಿ ಹಾಗೂ ಹೆಚ್ಚಿನ ಹಣ ಸಂಪಾದನೆಗಾಗಿ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿರುವುದು ವಿಚಾರಣೆಯಿಂದ ಕಂಡುಬಂದಿರುತ್ತದೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿರುತ್ತದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರದ ಕೇಂದ್ರ ಅಪರಾಧ ವಿಭಾಗದ ಅಪರ ಆಯುಕ್ತ ಅಲೋಕ್ ಕುಮಾರ್, ಉಪ ಪೊಲೀಸ್ ಆಯುಕ್ತ (ಅಪರಾಧ) ಎಸ್.ಗಿರೀಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News