ಹನೂರು: 63ನೇ ಕನ್ನಡ ರಾಜ್ಯೋತ್ಸವ ಆಚರಣೆ
ಹನೂರು,ನ.2: ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿಯೇ ನಾಡು, ಜಲ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಗೋಪಿನಾಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂತೋಷ್ ಕುಮಾರ್ ಹೇಳಿದರು.
ರಾಜ್ಯದ ತಮಿಳುನಾಡು ಗಡಿಹಂಚಿನಲ್ಲಿರುವ ಗೋಪಿನಾಥಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯವು ಇಂದು 63 ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ನಾಡಿನ ಭಾಷೆ, ನೆಲ, ಜಲ ಉಳಿವಿಗಾಗಿ ಹಲವಾರು ಮಹನೀಯರು ಶ್ರಮಿಸಿದ್ದು, ಇಂದಿನ ಪೀಳಿಗೆಯ ನಾವೆಲ್ಲರೂ ಭಾಷಾ ಪ್ರೇಮ ಬೆಳೆಸಿಕೊಳ್ಳಬೇಕಾಗಿದೆ. ದೇಶದ ಎಲ್ಲಾ ಭಾಷೆಗಳನ್ನು ಗೌರವಿಸುವುದರ ಜೊತೆಗೆ ನಮ್ಮ ನಾಡ ಭಾಷೆ ಕನ್ನಡವನ್ನು ಬೆಳೆಸಿ ಉಳಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಗಡಿಯಂಚಿನ ಭಾಗದಲ್ಲಿ ಎರಡೂ ರಾಜ್ಯಗಳ ಭಾಷೆಯ ಪ್ರಭಾವ ಇದ್ದು, ಕನ್ನಡ ಭಾಷೆಯನ್ನು ಎಲ್ಲರೂ ಸಮಾನವಾಗಿ ಗೌರವಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಶಿಕ್ಷಕರಾದ ಗೋವಿಂದರಾಜು, ಕುಮಾರ್, ಜಾಕುಲಿನ್, ಸಂತೋಷ್ ಕುಮಾರ್, ಗ್ರಾ.ಪಂ ಸಿಬ್ಬಂದಿ ತಂಗವೇಲು, ಗ್ರಾಮಸ್ಥರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.