ಕರಗಡ ಯೋಜನೆ: ಕಾಮಗಾರಿ ಪೂರ್ಣಕ್ಕೆ 1 ತಿಂಗಳ ಗಡುವು ನೀಡಿದ ಸಚಿವ ಜಾರ್ಜ್

Update: 2018-11-02 18:09 GMT

ಚಿಕ್ಕಮಗಳೂರು, ನ.2: ಕರಗಡ ನೀರಾವರಿ ಯೋಜನೆ ಸಂಬಂಧ ದೇವಿಕೆರೆಯ ನೀರನ್ನು ಮೋಟರ್ ನಿಂದ ಮೇಲೆತ್ತಿ ಪೈಪ್‍ಲೈನ್ ಮೂಲಕ ಬೆಳವಾಡಿ ಭಾಗದ ಕೆರೆಗಳಿಗೆ ತುಂಬಿಸುವ ಕಾಮಗಾರಿಯನ್ನು ಇನ್ನೊಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ತಪ್ಪಿಸಲ್ಲಿ ಸಂಬಂಧಿಸಿದ ಇಂಜಿನಿಯರ್ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ, ಮಾಹಿತಿ, ಜೈವಿಕ ತಂತ್ರಜ್ಞಾನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ಕರಗಡ ಕುಡಿಯುವ ನೀರಿನ ಯೋಜನೆ ಪ್ರದೇಶದಲ್ಲಿ ವಿವಿಧ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಿಕೆರೆಯಿಂದ ಕಾಲುವೆ ಮೂಲಕ ಬೆಳವಾಡಿ ಭಾಗದ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಯೋಜನಾ ಬದ್ಧವಾಗಿ ಕೈಗೊಳ್ಳದ ಪರಿಣಾಮ ಕೆರೆಯ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯದಂತಾಗಿದೆ. ಈ ಕಾರಣಕ್ಕೆ ದೇವಿಕೆರೆಯಲ್ಲಿ ಕೋಡಿ ಬಿದ್ದು ಹರಿಯುವ ನೀರನ್ನು ಮಾಳೇನಹಳ್ಳಿಯವರೆಗೆ ಮಾಳೇನಹಳ್ಳಿಯವರೆಗೆ ತಾತ್ಕಾಲಿಕವಾಗಿ ಮೋಟಾರ್ ಗಳನ್ನು ಅಳವಡಿಸಿ ನೀರನ್ನು ಪಂಪ್ ಮಾಡಿ ಬೆಳವಾಡಿ ದೊಡ್ಡ ಕೆರೆಗೆ ನೀರು ಹರಿಸುವ ಕಾಮಗಾರಿಯನ್ನು ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಇದನ್ನು ಒಂದು ತಿಂಗಳ ಗಡುವಿನೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳು ಶೀಘ್ರ ಕಾರ್ಯಪ್ರವೃತ್ತರಾಗಿ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಕಠಿಣ ಕಾನೂನುಕ್ರಮ ಜರಗಿಸುವುದಾಗಿ ತಿಳಿಸಿದರು. 

ಪೈಪ್‍ಲೈನ್ ಮೂಲಕ ನೀರು ಹರಿಸಲು ತಾತ್ಕಾಲಿಕವಾಗಿ ಮೋಟಾರ್ ಗಳನ್ನು ಬಳಕೆ ಮಾಡಲು ಅಗತ್ಯವಿರುವ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಮಾಡಲಾಗಿದೆ. ಶೀಘ್ರದಲ್ಲಿ 200 ಎಚ್‍ಪಿ ಮೋಟಾರ್ ಅಳವಡಿಸಿ ನೀರು ಹರಿಸುವ ಭರವಸೆಯನ್ನು ಸಂಬಂಧಪಟ್ಟ ಇಂಜಿನಿಯರ್ ಗಳು ನೀಡಿದ್ದಾರೆ. ಈಗಾಗಲೇ ಪ್ರಗತಿಯಲ್ಲಿರುವ ಕಾಲುವೆ ಕಾಮಗಾರಿಯಲ್ಲಿ ಕರಗಡದಿಂದ ಮಾಳೇನಹಳ್ಳಿಯವರೆಗಿನ ಕಾಲುವೆಯಲ್ಲಿ ಹಲವೆಡೆ ಬಂಡೆಗಳನ್ನು ಒಡೆಯಬೇಕಾಗಿದೆ. ಅಗತ್ಯವಿರುವೆಡೆ ಮರಳು ಚೀಲಗಳನ್ನು ಹಾಕಿ ನೀರನ್ನು ಹೆಚ್ಚುವರಿಯಾಗಿ ಸಂಗ್ರಹಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದ ಅವರು, ಮುಂಬರುವ ಮಳೆಗಾಲದ ವೇಳೆಗೆ ಕಾಲುವೆ ಮೂಲಕ ನೀರು ಹರಿಸಲು ಬಾಕಿಯಿರುವ ಬಂಡೆಗಳನ್ನು ಒಡೆದು ನೀರು ಸರಾಗವಾಗಿ ಹರಿಯುವ ಶಾಶ್ವತ ಕಾಮಗಾರಿಯನ್ನು ಸಹ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ದೇವಿಕೆರೆಯಿಂದ ಮಾಳೇನಹಳ್ಳಿಯವರೆಗಿನ ನಾಲ್ಕೂವರೆ ಕಿ.ಮೀ. ವ್ಯಾಪ್ತಿಯಲ್ಲಿ ತೆಗೆದಿರುವ ಕಾಲುವೆಯು ಹೆಚ್ಚು ಅಳವಾಗಿರುವುದರಿಂದ ಮಣ್ಣು ಕುಸಿದು ಕಾಲುವೆಗಳು ಮುಚ್ಚಿಕೊಳ್ಳುತ್ತಿವೆ ಎಂಬ ದೂರು ಬಂದಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಸಿಎಂ ಸೂಚನೆ ಮೇರೆಗೆ ನಿವೃತ್ತ ಮುಖ್ಯ ಇಂಜಿನಿಯರ್ ಚಂದ್ರಶೇಖರ್ ನೇತೃತ್ವದ 4 ಮಂದಿ ತಜ್ಞರನ್ನೊಳಗೊಂಡ ಸಮಿತಿ ಕಾಮಗಾರಿ ಪ್ರದೇಶವನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದೆ. ಸಮಿತಿ ಕಾಲುವೆಯಲ್ಲಿ ದೊಡ್ಡ ಗಾತ್ರದ ಪೈಪ್‍ಗಳನ್ನು ಅಳವಡಿಸಬೇಕೆಂಬ ಸಲಹೆ ನೀಡಿದೆ. ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಶೀಘ್ರದಲ್ಲಿಯೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಎಸ್.ಎಲ್.ಧರ್ಮೇಗೌಡ, ತಾ.ಪಂ.ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಗಳು ಸೇರಿದಂತೆ ಹಲವು ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಗರದಲ್ಲಿ ಪ್ರಗತಿಯಲ್ಲಿರುವ ಯುಜಿಡಿ ಕಾಮಗಾರಿಯು ಹಲವು ತಾಂತ್ರಿಕ ಕಾರಣಗಳಿಂದ ಅಪೂರ್ಣಗೊಂಡಿದೆ. ಸಮಸ್ಯೆಗಳನ್ನು ಪರಿಹರಿಸಿ ಮುಂದಿನ ಮಾರ್ಚ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಡುವು ನೀಡಲಾಗಿದೆ. ಅಮೃತ್ ಯೋಜನೆಯನ್ನು 2019ರ ಜೂನ್ ತಿಂಗಳ ವೇಳೆಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಿನಿ ಏರ್ಪೋರ್ಟ್ ಕಾಮಗಾರಿಯ ಬಫರ್‍ಜೋನ್‍ಗಾಗಿ ಹೆಚ್ಚುವರಿಯಾಗಿ ಭೂಮಿಯ ಅಗತ್ಯವಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗುವುದು.
- ಕೆಜೆ ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ

ಮೋಟರ್ ಪಂಪ್ ಮೂಲಕ ದೇವಿಕೆರೆ ನೀರನ್ನು ಪೈಪ್‍ಲೈನ್ ಮೂಲಕ ಹರಿಸುವ ಕಾಮಗಾರಿ ಸ್ಥಳಕ್ಕೆ ಪರಿಶೀಲನೆ ವೇಳೆ ಸಚಿವ ಜಾರ್ಜ್ ಬಳಿ ಗ್ರಾಮಸ್ಥರು ದೂರು ಹೇಳಿಕೊಂಡರು. ಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಗುತ್ತಿಗೆದಾರರು ಕೈಗೆ ಸಿಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕೇವಲ ಪ್ರವಾಸಕ್ಕೆ ಬಂದು ಹೋಗುವಂತೆ ಮಾಡುತ್ತಿದ್ದಾರೆಯೇ ಹೊರತು ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಕೆರೆಯಲ್ಲಿ ನೀರಿದ್ದರೂ ಕೃಷಿ ಹಾಗೂ ಕಡಿಯಲು ನೀರು ಸಿಗದಂತಾಗಿದೆ. ಜಾನುವಾರುಗಳಿಗೂ ನೀರು ಸಿಗುತ್ತಿಲ್ಲ. ಕಾಲುವೆಯನ್ನು ಕೆಲವೆಡೆ ಭಾರೀ ಆಳದಲ್ಲಿ ನಿರ್ಮಿಸಿರುವುದರಿಂದ ಜನ ಜಾನುವಾರುಗಳು ಕಾಲುವೆಯಲ್ಲಿ ಹರಿಯದೇ ನಿಂತಿರುವ ನೀರಿಗೆ ಬಿದ್ದು ಸಾಯುತ್ತಿದ್ದಾರೆ. ಕಾಲುವೆಯ ಎರಡೂ ಬದಿಗಳಲ್ಲಿ ಬೇಲಿ ನಿರ್ಮಿಸಲು ನಿರ್ಲಕ್ಷ್ಯವಹಿಸಲಾಗಿದೆ. ಹಿಂದಿನ ಗುತ್ತಿಗೆದಾರನಿಂದಲೇ ಬಾಕಿ ಕಾಮಗಾರಿಗಳನ್ನು ಮಾಡಿಸಬಾರದು ಎಂದು ಸಚಿವರ ಬಳಿ ಅಳಲು ತೋಡಿಕೊಮಡರು. ಇದಕ್ಕೆ ಸಾವದಾನದಿಂದ ಉತ್ತರಿಸಿದ ಸಚಿವರು. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಹಾಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News