ರಾಮಮಂದಿರ ನಿರ್ಮಾಣಕ್ಕೆ ಕಾನೂನು ತರುವ ಸಾಧ್ಯತೆ: ನಿವೃತ್ತ ನ್ಯಾಯಮೂರ್ತಿ

Update: 2018-11-03 03:39 GMT

ಮುಂಬೈ, ನ. 3: ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್‌ನ ಮುಂದಿದ್ದರೂ, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಕಾನೂನನ್ನು ಸರ್ಕಾರ ರೂಪಿಸುವ ಸಾಧ್ಯತೆ ಇದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ ಹೇಳಿದ್ದಾರೆ.

ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಶಾಸನಾತ್ಮಕ ಪ್ರಕ್ರಿಯೆ ಮೂಲಕ ಕ್ರಮ ಕೈಗೊಂಡ ನಿದರ್ಶನಗಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಸೂಕ್ತವಾದ ಕಾನೂನು ಜಾರಿಗೊಳಿಸುವಂತೆ ಸಂಘ ಪರಿವಾರದಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. 

ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಸಮಾವೇಶದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವರ್ಷದ ಆರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಆಕ್ಷೇಪಿಸಿದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಇವರೂ ಒಬ್ಬರು.

ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇರುವಾಗ ಸಂಸತ್ತು ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಕಾನೂನು ಜಾರಿಗೊಳಿಸಲು ಸಾಧ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ ಆ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.

"ಕಾನೂನಾತ್ಮಕವಾಗಿ ಅದು ಸಾಧ್ಯವಾಗುತ್ತದೆಯೇ ಇಲ್ಲವೇ ಎನ್ನುವುದು ಒಂದು ಆಯಾಮ; ಅದು ಸಂಭವಿಸುತ್ತದೆಯೇ ಇಲ್ಲವೇ ಎನ್ನುವುದು ಮತ್ತೊಂದು. ಆದರೆ ಇತಿಹಾಸದಲ್ಲಿ ಇಂಥ ನಿರ್ಧಾರ ಕೈಗೊಂಡ ನಿದರ್ಶನಗಳಿವೆ" ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News