ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ: ನ.6ರ ಫಲಿತಾಂಶದತ್ತ ಎಲ್ಲರ ಚಿತ್ತ
ಬೆಂಗಳೂರು, ನ. 3: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತದಾನ ಶಾಂತಿಯುತ ಅಂತ್ಯಕಂಡಿದೆ. ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ನ.6ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಶನಿವಾರ ಬೆಳಗ್ಗೆ 7ಗಂಟೆಯಿಂದಲೇ ನೀರಸವಾಗಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸು ಪಡೆದುಕೊಂಡಿತ್ತು. ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಕೆಲವೆಡೆ ಮತಯಂತ್ರ ಕೈಕೊಟ್ಟ ಪರಿಣಾಮ ಕೊಂಚ ವಿಳಂಬವಾಗಿತ್ತು. ಕೆಲವು ಕಡೆ ಮತದಾನ ಬಹಿಷ್ಕಾರದ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಮತದಾನ ಬಹುತೇಕ ಶಾಂತಿಯುತವಾಗಿತ್ತು.
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಉಪ ಚುನಾವಣೆ ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿಯ ನಡುವೆ ಪೈಪೋಟಿ ಸೃಷ್ಟಿಸಿದೆ. ಉಪ ಚುನಾವಣೆಯಲ್ಲಿ ಮತದಾರನ ಒಲವು ಯಾರ ಪರ ಎನ್ನುವುದು ಗುಟ್ಟಾಗಿದ್ದರೂ, ವಿಜಯಮಾಲೆ ಯಾರಿಗೆ ಎಂಬುದು ನ.6ರಂದು ಗೊತ್ತಾಗಲಿದೆ.
ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳು ಹಾಗೂ ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ವಿ.ಎಸ್. ಉಗ್ರಪ್ಪ-ಜೆ.ಶಾಂತಾ, ಮಧು ಬಂಗಾರಪ್ಪ-ಬಿ.ವೈ.ರಾಘವೇಂದ್ರ, ಎಲ್.ಆರ್. ಶಿವರಾಮೇಗೌಡ-ಡಾ.ಸಿದ್ದರಾಮಯ್ಯ, ಅನಿತಾ ಕುಮಾರಸ್ವಾಮಿ, ಆನಂದ್ ನ್ಯಾಮಗೌಡ ಹಾಗೂ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ ಒಟ್ಟಾರೆ ಐದು ಕ್ಷೇತ್ರಗಳಿಂದ 30ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದು, ಲೋಕಸಭೆ ಮತ್ತು ವಿಧಾನಸಭೆ ಪ್ರವೇಶಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮಾಜಿ ಸಿಎಂ ಬಿಎಸ್‌ವೈ ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿಕಾರಿಪುರದ ತಾ.ಪಂ.ಕಟ್ಟಡದಲ್ಲಿನ ಮತಗಟ್ಟೆ 132ರಲ್ಲಿ, ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಕುಟುಂಬದ ಸದಸ್ಯರೊಂದಿಗೆ ಸೊರಬದ ಬೂತ್ ನಂ.31ರಲ್ಲಿ ಹಕ್ಕು ಚಲಾಯಿಸಿದರು.
ಬಳ್ಳಾರಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ತನ್ನ ಪುತ್ರಿ, ಅಳಿಯನ ಜತೆ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ನಟ ಅಂಬರೀಶ್ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಮತಗಟ್ಟೆ ಸಂಖ್ಯೆ- 164ರಲ್ಲಿ ಮತ ಚಲಾಯಿಸಿದರು.
ಜಮಖಂಡಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ನ್ಯಾಮಗೌಡ ತನ್ನ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಮತಗಟ್ಟೆ ಸಂಖ್ಯೆ-125ರಲ್ಲಿ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಸೋಮಶೇಖರೆಡ್ಡಿ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸಹಿತ ಹಲವು ಗಣ್ಯರು ತಮ್ಮ ಹಕ್ಕು ಚಲಾವಣೆ ಮಾಡಿದರು.
ಮತದಾನ ವಂಚಿತರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ. ಎಸ್.ಉಗ್ರಪ್ಪ, ರಾಮನಗರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿ ಕಣದಿಂದ ಹಿಂದೆ ಸರಿದಿರುವ ಚಂದ್ರಶೇಖರ್ ಮತದಾನದಿಂದ ವಂಚಿತರಾಗಿದ್ದಾರೆ.
ತುಮಕೂರಿನ ಪಾವಗಡ ಮೂಲದ ಉಗ್ರಪ್ಪ ಬೆಂಗಳೂರು ನಗರದಲ್ಲಿ ಮತದಾನ ಹಕ್ಕು ಹೊಂದಿದ್ದಾರೆ. ಅದೇರೀತಿ ಅನಿತಾ ಕುಮಾರಸ್ವಾಮಿ ಬಿಡದಿ ಹೋಬಳಿ ಕೇತಮಾರನಹಳ್ಳಿ ವ್ಯಾಪ್ತಿಗೆ ಬರುವುದರಿಂದ ಅವರಿಗೆ ತಮ್ಮ ಮತ ಹಾಕಿಕೊಳ್ಳಲು ಸಾಧ್ಯವಾಗಿಲ್ಲ.
ಈ ಮಧ್ಯೆ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಲುಕಿ ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರವೇಶ ನಿರ್ಬಂಧಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಉಪ ಚುನಾವಣೆ ಮತದಾನದಿಂದ ವಂಚಿತರಾಗಿದ್ದು, ವಿಶೇಷವಾಗಿದೆ.
ವಿಕಲಚೇತನರಿಗೆ ವಾಹನ ವ್ಯವಸ್ಥೆ: ಇದೇ ಮೊದಲಬಾರಿಗೆ ವಿಕಲಚೇತನ ಮತದಾರರಿಗೆ ಚುನಾವಣಾ ಆಯೋಗ ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ರಾಮನಗರ ಕ್ಷೇತ್ರದ ಮೊಟ್ಟೆದೊಡ್ಡಿ ಮತಗಟ್ಟೆ 179ರಲ್ಲಿ ಕೊಳಕು ಮಂಡಲ ಹಾವು ಕಾಣಿಸಿಕೊಂಡ ಪರಿಣಾಮ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆ ಬಳಿಕ ಮತಗಟ್ಟೆ ಸಿಬ್ಬಂದಿ, ಗ್ರಾಮಸ್ಥರ ನೆರವಿನಿಂದ ಹಾವನ್ನು ಹೊರಹಾಕಿದ್ದಾರೆ.
ಮತದಾನ ಬಹಿಷ್ಕಾರ: ಬಳ್ಳಾರಿಯ ಹರಗಿನಡೋಣಿ ಗ್ರಾಮಸ್ಥರು, ಕುಡಿಯುವ ನೀರು ಸೇರಿದಂತೆ ಗ್ರಾಮಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಮತ ಹಾಕುವಂತೆ ಗ್ರಾಮಸ್ಥರ ಮನವೊಲಿಸುವ ಪ್ರಯತ್ನಿಸಿದರೂ, ಸಫಲವಾಗಲಿಲ್ಲ. ಹೀಗಾಗಿ ಈ ಗ್ರಾಮದ ಮೂರು ಮತಗಟ್ಟೆಗಳಲ್ಲಿ ಒಬ್ಬ ವ್ಯಕ್ತಿಯೂ ತಮ್ಮ ಹಕ್ಕು ಚಲಾಯಿಸಲಿಲ್ಲ.
ಮುನ್ನೆಚ್ಚರಿಕೆ ಕ್ರಮವಾಗಿ ಐದು ಕ್ಷೇತ್ರಗಳ ಎಲ್ಲ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೆ, ಭದ್ರತೆಗೆ ಕೇಂದ್ರ ಮೀಸಲು ಪಡೆ ಸೇರಿದಂತೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
‘ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ-ಸಹ್ಯಾದ್ರಿ ಕಾಲೇಜು, ಮಂಡ್ಯ-ಸರಕಾರಿ ಕಾಲೇಜು ಹಾಗೂ ಜಮಖಂಡಿ-ಮಿನಿ ವಿಧಾನಸೌಧ, ರಾಮನಗರ ಕ್ಷೇತ್ರದ ಮತಯಂತ್ರಗಳನ್ನು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ’
ಶೇಕಡವಾರು ಮತದಾನ
-ಜಮಖಂಡಿ-ಶೇ.81.58
-ರಾಮನಗರ-ಶೇ.73.71
-ಬಳ್ಳಾರಿ-ಶೇ.63.85
-ಶಿವಮೊಗ್ಗ-ಶೇ.61.05
-ಮಂಡ್ಯ-ಶೇ.53.93 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ತಿಳಿಸಿದೆ.