ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ: ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ

Update: 2018-11-03 14:17 GMT

ಹಾಸನ,ನ.3: 5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಅದಿದೇವತೆ ಹಾಸನಾಂಬ ದೇವಾಲಯಕ್ಕೆ ಶನಿವಾರ ಮದ್ಯಾಹ್ನ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಉಪಚುನಾವಣೆಯಲ್ಲಿ 5 ಸ್ಥಾನವನ್ನು ಮೈತ್ರಿ ಸರಕಾರ ಪಡೆಯಲಿದೆ. ಮಂಡ್ಯದಲ್ಲಿ ಎಲ್.ಆರ್. ಶಿವರಾಮೇಗೌಡರು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಉಳಿದ ಕಡೆಗಳಲ್ಲೂ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.

ಮಂಡ್ಯದಲ್ಲಿ ನಿಜವಾದ ರೈತಸಂಘದ ಕಾರ್ಯಕರ್ತರು ಬಿಜೆಪಿಗೆ ಮತ ಹಾಕುವುದಿಲ್ಲ. ಯಾರು ಏನೇ ಮಾತಾಡಿದರೂ ಅವರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು. ಸರಕಾರ ಪತನದ ಬಗ್ಗೆ ಬಿಜೆಪಿಯವರು ಗಡುವುಗಳನ್ನು ನೀಡುತ್ತಾ ಬಂದಿದ್ದು, ಆ ಗಡುವು ಮುಗಿದು ಹೋಗಿದೆ. ಸರ್ಕಾರ ಬೀಳಿಸುವುದು ಕೇವಲ ಬಿಜೆಪಿಯವರ ಭ್ರಮೆ ಎಂದರು.

ಮಂಡ್ಯದಲ್ಲಿ ಬದ್ಧ ವೈರಿಗಳಾಗಿರುವ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡುವುದು ಕಷ್ಟ ಎಂಬುದು ನನಗೂ ತಿಳಿದಿದೆ ಎಂದ ಅವರು, ಆದರೆ ರಾಷ್ಟ್ರಮಟ್ಟದಲ್ಲಿ ಆಗಿರುವ ನಿರ್ಧಾರವನ್ನು ನಾವೆಲ್ಲರೂ ಪಾಲಿಸುವುದು ಅನಿವಾರ್ಯ. ಇಂದಿನ ಉಪ ಚುನಾವಣೆ ಮುಂದಿನ ಲೋಕಸಭೆಗೆ ವೇದಿಕೆಯಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News