ಶಿವಮೊಗ್ಗ ಲೋಕಸಭಾ ಉಪಚುಣಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಧು ಬಂಗಾರಪ್ಪ

Update: 2018-11-03 14:56 GMT

ಸೊರಬ,ನ.3: ಎಲ್ಲಾ ಪಕ್ಷದಲ್ಲೂ ಬಂಗಾರಪ್ಪ ಅಭಿಮಾನಿಗಳು ಇದ್ದು, ಈ ಚುನಾವಣೆಯಲ್ಲಿ ಬಿಜೆಪಿಯ ಮುಖಂಡರು ಸಹ ನನಗೆ ಮತ ಹಾಕಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಉಪಚುಣಾವಣೆಯ ಅಭ್ಯರ್ಥಿ ಮಧುಬಂಗಾರಪ್ಪ ವಿಶ್ವಾಸದಿಂದ ನುಡಿದರು.

ಶನಿವಾರ ಕುಬಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ತಾಲೂಕಿನ ಶಾಸಕರ ವರ್ತನೆಯಿಂದ ಕ್ಷೇತ್ರದ ಜನರು ರೋಸಿ ಹೋಗಿದ್ದು, ನನ್ನ ಅವಧಿಯಲ್ಲಿ ಕೈಗೊಂಡ ಅಭಿವೃಧಿ ಕೆಲಸಗಳು ಈ ಚುನಾವಣೆಗೆ ಸಹಕಾರಿಯಾಗಿದೆ ಎಂದರು.

ಎಲ್ಲಾ ತಾಲೂಕುಗಳಲ್ಲೂ ಉತ್ತಮ ವಾತವರಣವಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಹೊಂದಿಕೊಂಡು ನನ್ನ ಗೆಲುವಿಗಾಗಿ ಸಂಘಟನಾತ್ಮಕ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಸರ್ಕಾರ ಹಾಗೂ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಅಭಿವೃಧಿ ಕೆಲಸಗಳು ಜೊತೆಗೆ ಅಪಾರ ಬಂಗಾರಪ್ಪ ಅವರ ಅಭಿಮಾನಿಗಳ ಬೆಂಬಲದಿಂದ ಬಹುಮತಗಳಿಂದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವೆ ಎಂದರು.

ನಾಲ್ಕು ತಿಂಗಳಲ್ಲಿ ಏನು ಮಾಡುವರು ಎಂಬ ಆಸಡ್ಡೆಯ ಭಾವನೆ ಬೇಡ. ಈ ಅವಧಿಯಲ್ಲಿ ನನಗೆ ಅವಕಾಶ ಸಿಕ್ಕರೆ ಸಾಕಷ್ಟು ಅಭಿವೃಧಿ ಕೆಲಸ ಮಾಡುವೆ ಮತ್ತು ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡುವೆ ಎಂಬ ಹೇಳಿದರು.

ಎಂ.ಪಿ.ರವಿಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಪಕ್ಷ ಬೇರೆ ಇರಬಹುದು. ಆದರೆ ಅವರು ಉತ್ತಮ ಗುಣಗಳನ್ನು ಹೊಂದಿರುವ ವ್ಯಕ್ತಿ. ನನಗೆ ತುಂಬಾ ಆತ್ಮೀಯರಾಗಿದ್ದರು ಎಂದು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News