×
Ad

ಮಂಡ್ಯ: ಕುದರಗುಂಡಿ ಕಾಲನಿ ನಿವಾಸಿಗಳಿಂದ ಮತದಾನ ಬಹಿಷ್ಕಾರ; ಮನವೊಲಿಕೆ ನಂತರ ಹಕ್ಕು ಚಲಾವಣೆ

Update: 2018-11-03 21:30 IST

ಮಂಡ್ಯ, ನ.3: ಮದ್ದೂರು ತಾಲೂಕಿನ ಕುದರಗುಂಡಿ ಗ್ರಾಮದ ದಲಿತ ಕಾಲನಿಯ ನಿವಾಸಿಗಳು ಸರಕಾರದಿಂದ ಮಂಜೂರಾಗಿರುವ ಜಮೀನನ್ನು ನಮಗೆ ಖಾತೆ ಮಾಡಿಸಿಕೊಟ್ಟಿಲ್ಲ ಎಂದು ಆರೋಪಿಸಿ ಲೋಕಸಭಾ ಉಪ ಚುನಾವಣೆ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೆ ನಂಬರ್ 245ರಲ್ಲಿ ಸುಮಾರು 97 ಎಕರೆ ಪ್ರದೇಶ ದಲಿತರಿಗೆ ಸೇರಿದ್ದ ಜಮೀನಿದ್ದು, ಇದರಲ್ಲಿ 10 ಎಕರೆ ಪ್ರದೇಶವನ್ನು ಯಾರಿಗೂ ಹೇಳದೆ ಕೇಳದೆ ಜನಪ್ರತಿನಿಧಿಗಳು ಪವರ್ ಸ್ಟೇಷನ್ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ನೀಡಿರುವ ಜಮೀನುಗಳು ಇನ್ನೂ ಕೂಡ ಸರಕಾರದ ಹೆಸರಿನಲ್ಲಿ ಬರುತ್ತಿದೆ. ನಮ್ಮ ಹೆಸರಿಗೆ ಖಾತೆಯಾಗಿಲ್ಲ. ಖಾತೆ ಮಾಡಿಕೊಡಬೇಕು ಎಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಲಿತ ಕಾಲನಿ ಎಂಬ ಉದ್ದೇಶದಿಂದ ಉದಾಸೀನ ಮನೋಭಾವ ತಾಳಿದ್ದಾರೆಂದು ಅವರು ಆರೋಪಿಸಿದರು.

ಗ್ರಾಮದಲ್ಲಿ 500 ಮತದಾರರಿದ್ದು ನಮ್ಮ ಬೇಡಿಕೆಗಳು ಈಡೇರುವ ತನಕ ಮತದಾನ ಮಾಡುವುದಿಲ್ಲ. ಜತೆಗೆ ಮುಂದಿನ ಚುನಾವಣೆಗಳಲ್ಲೂ ಮತದಾನ ಮಾಡುವುದಿಲ್ಲ ಎಂದು ಅವರು ಪಟ್ಟುಹಿಡಿದರು.

ಸ್ಥಳಕ್ಕೆ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಆಗಮಿಸಿ ನಿಮ್ಮ ಬೇಡಿಕೆಗಳನ್ನು 6 ತಿಂಗಳಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಮತದಾನದಲ್ಲಿ ಪಾಲ್ಗೊಂಡರು.

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು, ಮುಖಂಡರಾದ ಸಿದ್ದರಾಜು, ಮಹದೇವು, ಚಿಕೋನಯ್ಯ, ಶಿವಣ್ಣ, ಯಶೋಧಮ್ಮ, ದೇವಮ್ಮ, ಬಸವಮ್ಮ, ಗೌರಮ್ಮ, ಶಶಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News