ಮೈತ್ರಿ ಮುಂದುವರೆದರೆ ಕಾಂಗ್ರೆಸ್ ಸರ್ವನಾಶ: ಮಾಜಿ ಶಾಸಕ ಬಿ.ರಾಮಕೃಷ್ಣ ಆತಂಕ
ಮಂಡ್ಯ, ನ.3: ಮುಂದಿನ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರೆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಮತಗಟ್ಟೆ 128 ರಲ್ಲಿ ಮತದಾನ ಮಾಡಿ ಮಾತನಾಡಿದ ಅವರು, ಮೈತ್ರಿಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಬೇಸರವಾಗಿದ್ದು, ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ನೆಲೆ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಮತದಾನ ಕಡಿಮೆಯಾಗಿರುವುದರಿಂದ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗೆಲುವು ಸಾಧಿಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಮಖಂಡರಾದ ಮಹೇಶ್, ರಾಜೇಶ್ ಇನ್ನಿತರರು ಹಾಜರಿದ್ದರು.
ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ: ಸಾದೊಳಲು ಗ್ರಾಮದ 114ರ ಮತಗಟ್ಟೆಯಲ್ಲಿ ಮತಚಲಾಯಿಸಿದ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು ಗೆಲ್ಲುವುದು ಶತಸಿದ್ದ ಎಂದು ವಿಶ್ವಾಶ ವ್ಯಕ್ತಪಡಿಸಿದರು.
ಜೆಡಿಎಸ್ ಮೈಸೂರು ವಿಭಾಗದ ವೀಕ್ಷಕ ಸಾದೊಳಲು ಸ್ವಾಮಿ, ಮುಖಂಡರಾದ ಬಸವರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.