ಉಪ ಚುನಾವಣೆ: ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಖಂಡರು ಮಗ್ನ

Update: 2018-11-04 13:38 GMT

ಬೆಂಗಳೂರು, ನ. 4: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿ ಮುಖಂಡರ ಮಧ್ಯೆ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಅವಕಾಶ ಕಲ್ಪಿಸಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಈ ಉಪ ಚುನಾವಣೆ ಮತ ಎಣಿಕೆ ಕಾರ್ಯ ನ.6 ರಂದು ನಡೆಯಲಿದ್ದು, ಅದೇ ದಿನ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ಈ ಸಮರದಲ್ಲಿ ಗೆದ್ದರೆ ಅಥವಾ ಸೋತರೆ ಆಗುವ ಪರಿಣಾಮಗಳ ಬಗ್ಗೆ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ.

ಐದು ಕ್ಷೇತ್ರಗಳ ಪೈಕಿ ಬಳ್ಳಾರಿ, ಮಂಡ್ಯ, ರಾಮನಗರ ಮತ್ತು ಜಮಖಂಡಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳ ವರದಿಗಳಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿ ಮಧ್ಯೆ ತೀವ್ರ ಪೈಪೋಟಿ ಇದೇ ಎಂಬ ಗುಪ್ತಚರ ಮೂಲಗಳ ಮಾಹಿತಿ ಸಿಕ್ಕಿದೆ ಎಂದು ಗೊತ್ತಾಗಿದೆ.

ಮೈತ್ರಿ ಸರಕಾರಕ್ಕೆ ಫಲಿತಾಂಶ ವ್ಯತಿರಿಕ್ತವಾದರೆ ಮುಂದೇನೆಂಬ ಬಗ್ಗೆ ಮೈತ್ರಿ ಪಕ್ಷಗಳ ನಾಯಕರು ಸಮಾಲೋಚನೆಯಲ್ಲಿ ತೊಡಗಿದ್ದರೆ, ವಿಪಕ್ಷ ಬಿಜೆಪಿಗೆ ಫಲಿತಾಂಶ ಉಲ್ಟಾ ಹೊಡೆದರೆ ಏನು ಮಾಡಬೇಕೆಂಬ ಚಿಂತೆಯಲ್ಲಿ ಅವರು ಚರ್ಚೆ ನಡೆಸುತ್ತಿದ್ದಾರೆ. ಫಲಿತಾಂಶ ನಮ್ಮ ಪರ ಬಂದರೆ ಸರಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದರೆ, ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮೈತ್ರಿ ಬಾಂಧವ್ಯ ಹೇಗೆ ಗಟ್ಟಿಗೊಳಿಸಬೇಕೆಂಬ ಆಲೋಚನೆಯಲ್ಲಿ ಮುಖಂಡರು ಮಗ್ನರಾಗಿದ್ದಾರೆ.

ವಿಶ್ರಾಂತಿಗೆ ಶರಣು: ಹದಿನೈದು ಇಪ್ಪತ್ತು ದಿನಗಳಿಂದ ಮತದಾರರ ಮನಗೆಲ್ಲಲು ಪ್ರಚಾರದ ಭರಾಟೆಯಲ್ಲಿದ್ದ ಅಭ್ಯರ್ಥಿಗಳು-ರಾಜಕೀಯ ಪಕ್ಷಗಳ ಮುಖಂಡರು ವಿಶ್ರಾಂತಿಗೆ ಶರಣಾಗಿದ್ದರೆ, ಅತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೆಲುವು ನಮ್ಮದೆ ಎಂದು ಬೆಟ್ಟಿಂಗ್ ದಂಧೆಯ ಮೊರೆ ಹೊಕ್ಕಿದ್ದಾರೆ.

ದಿಲ್ಲಿಗೆ ಪ್ರಯಾಣ: ಬಳ್ಳಾರಿ ಉಸ್ತುವಾರಿ ವಹಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಚುನಾವಣೆ ಬಳಿಕ ದಿಢೀರ್ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಕಾಂಗ್ರೆಸ್ ಸೇರಿದಂತೆ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದ್ದಾರೆ. ಉಪ ಚುನಾವಣೆ ಸೋಲು-ಗೆಲುವು, ತಂತ್ರಗಾರಿಕೆ ಬಗ್ಗೆ ವರಿಷ್ಠರಿಗೆ ವರದಿ ಸಲ್ಲಿಸಲು ಹೊಸದಿಲ್ಲಿಗೆ ತೆರಳಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News