ಟಿಪ್ಪು ಸುಲ್ತಾನ್ ಸರಕಾರ ನಡೆಸುತ್ತಿರುವವರ ಅಪ್ಪನಾ, ಅಜ್ಜನಾ?: ಶಾಸಕ ಸಿ.ಟಿ.ರವಿ

Update: 2018-11-04 16:22 GMT

ಚಿಕ್ಕಮಗಳೂರು, ನ.4: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿಯ ವಿರೋಧವಿದೆ. ಟಿಪ್ಪು ಜಯಂತಿಯನ್ನು ಮೈತ್ರಿ ಸರಕಾರ ಕೈಬಿಡಬೇಕು. ಹಿಂದಿನ ಕಾಂಗ್ರೆಸ್ ಸರಕಾರ ಮಾಡಿದ ತಪ್ಪನ್ನು ಮೈತ್ರಿ ಸರಕಾರ ಮುಂದುವರೆಸಿದರೆ ಜಯಂತಿ ಸಂದರ್ಭ ರಾಜ್ಯಾದ್ಯಂತ ಸಂಭವಿಸುವ ಅನಾಹುತಗಳಿಗೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪುರಂತಹ ಅಕ್ರಮಣಕಾರಿಯ ಜಯಂತಿ ಆಚರಣೆಯನ್ನು ಬಿಜೆಪಿ ಯಾವತ್ತೂ ಒಪ್ಪುವುದಿಲ್ಲ. ಸರಕಾರಕ್ಕೆ ಮುಸ್ಲಿಂ ನಾಯಕರ ಜಯಂತಿ ಮಾಡಬೇಕೆಂದರೆ ಸಂತ ಶಿಶುನಾಳ ಷರೀಫರ ಜಯಂತಿ ಆಚರಿಸಲಿ ಎಂದ ಅವರು, ಮೈತ್ರಿ ಸರಕಾರ ಈ ಬಾರಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಬಾರದು. ಹಿಂದಿನ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಿಸಲು ಹೋಗಿ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ಮೈತ್ರಿ ಸರಕಾರ ಇದನ್ನು ಮುಂದುವರೆಸಿದರೆ ರಾಜ್ಯದಾದ್ಯಂತ ಸಂಭವಿಸುವ ಅನಾಹುತಗಳಿಗೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದರು.

ಅಕ್ರಮಕಾರಿಯಾಗಿದ್ದ ಟಿಪ್ಪು ನಾಡಿನ ಹಲವು ದೇಗುಲಗಳ ನಾಶ ಮಾಡಿದ್ದಲ್ಲದೇ ಲೂಟಿ ಮಾಡಿದ್ದಾನೆ. ಟಿಪ್ಪು ಸುಲ್ತಾನ್ ಕನ್ನಡಿಗರ ವಿರೋಧಿಯಾಗಿದ್ದ ಎಂಬುದಕ್ಕೆ ದಾಖಲೆಗಳಿವೆ. ಹೀಗಾಗಿ, ಜಯಂತಿ ಆಚರಣೆ ಒಳ್ಳೆಯ ಬೆಳವಣಿಗೆ ಅಲ್ಲ. ಕಾಂಗ್ರೆಸ್‍ನವರು ಓಟಿನ ಆಸೆಗಾಗಿ ಬಾಬರ್, ಒಸಾಮ ಬಿನ್ ಲಾಡೆನ್‍ನಂತಹವರ ಜಯಂತಿಯನ್ನೂ ಮಾಡುತ್ತಾರೆ. ಯಾಕೆ ಟಿಪ್ಪು ಜಯಂತಿ ಆಚರಿಸಬೇಕು? ಆತನೇನು ಸರಕಾರ ನಡೆಸುತ್ತಿರುವವರ ಅಪ್ಪನ, ಅಜ್ಜನಾ, ಮುತ್ತಾತನಾ ಎಂದು ಆಕ್ರೋಶ ವ್ಯಕ್ತಪಡಿಸಿದ ರವಿ, ಮೈತ್ರಿ ಸರಕಾರ ಟಿಪ್ಪು ಜಯಂತಿಯನ್ನು ಕೈಬಿಟ್ಟು, ಅಗತ್ಯವಿದ್ದಲ್ಲಿ ಶಿಶುನಾಳ ಷರೀಫರ ಜಯಂತಿ ಆಚರಿಸಲಿ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜನತೆ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿರುವ ರೈತರ ಸಾಲಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಪೇಪರ್ ಟೈಗರ್ ಆಗಿದ್ದಾರೆ. ರೈತರ ಸಾಲಮನ್ನಾದ ಕುರಿತು ಬ್ಯಾಂಕ್‍ಗಳಿಗೆ ಆದೇಶ ಇನ್ನೂ ತಲುಪಿಲ್ಲ. ಕೇವಲ ಸಾಲಮನ್ನಾ ಮಾಡುತ್ತೇವೆಂದು ಪತ್ರಿಕಾ ಹೇಳಿಕೆ ನೀಡಿದರೆ ಬ್ಯಾಂಕ್‍ನವರು ಸುಮ್ಮನಿರುತ್ತಾರಾ? ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‍ನವರು ರೈತರಿಗೆ ನೋಟಿಸ್ ನೀಡುತ್ತಾರೆ. ರೈತರ ಸಾಲವನ್ನು ಸರಕಾರವೆ ಪಾವತಿ ಮಾಡುತ್ತದೆ ಎಂಬ ಆದೇಶವನ್ನು ಸರಕಾರ ಮುಖ್ಯಕಾರ್ಯದರ್ಶಿಯಿಂದ ಹೊರಡಿಸಬೇಕು. ಆದೇಶ ಹೊರಡಿಸಿದರೆ ಬ್ಯಾಂಕ್‍ನವರು ಯಾಕೆ ನೋಟಿಸ್ ನೀಡುತ್ತಾರೆ. ರೈತರ ಸಾಲಕ್ಕೆ ಸರಕಾರವೇ ಜವಾಬ್ದಾರಿ ಎಂದು ಬ್ಯಾಂಕ್‍ಗೆ ತಿಳಿ ಹೇಳಬೇಕು, ಬರಿ ಪೇಪರ್ ಹೇಳಿಕೆ ನೀಡಿದರೆ ಸಾಲದು.
- ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News