ದಾವಣಗೆರೆ: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದ ಪ್ರಕರಣ; ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

Update: 2018-11-05 13:38 GMT

ದಾವಣಗೆರೆ,ನ.5: ಶೀಲ ಶಂಕಿಸಿ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ತಾಲೂಕಿನ ಲೋಕಿಕೆರೆ ಗ್ರಾಮ ನಿವಾಸಿ, ಆಟೋ ಚಾಲಕ ಮಂಜುನಾಥ ಶಿಕ್ಷೆಗೆ ಗುರಿಯಾದ ಆರೋಪಿ. 18 ವರ್ಷಗಳ ಹಿಂದೆ ದಾವಣಗೆರೆ ಬೆಂಕಿ ನಗರದ ಎಲ್.ಡಿ.ಹನುಮಂತಪ್ಪನವರ ಪುತ್ರಿ ಸವಿತಾ ಜೊತೆ ಮದುವೆಯಾಗಿದ್ದ ಮಂಜುನಾಥ ದಂಪತಿಗೆ ಒಂದು ಗಂಡು, ಮತ್ತೊಂದು ಹೆಣ್ಣು ಮಗು ಇದ್ದವು. 
ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ದಾವಣಗೆರೆಯಲ್ಲಿ ಪತ್ನಿ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು. 

ನಿತ್ಯವೂ ಪತ್ನಿ ಸವಿತಾ ಜೊತೆಗೆ ಗಲಾಟೆ ಮಾಡುತ್ತಿದ್ದ ಮಂಜುನಾಥ, 2016 ಸೆ.26 ರಂದು ಸಂಜೆ 4.30ರ ವೇಳೆಯಲ್ಲಿ ಮಚ್ಚಿನಿಂದ ಸವಿತಾರ ಕುತ್ತಿಗೆ, ತಲೆ, ಮೈ-ಕೈಗೆ ಹೊಡೆದು ಕೊಲೆ ಮಾಡಿ, ನಂತರ ತಾನೂ ಅದೇ ಮಚ್ಚಿನಿಂದ ತನ್ನ ಕುತ್ತಿಗೆ ಮೇಲೆ ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾಗಿದೆ. 

ಘಟನೆ ಬಳಿಕ ಮೃತಳ ತಂದೆ ಎಲ್.ಡಿ.ಹನುಮಂತಪ್ಪ ಹದಡಿ ಪೊಲೀಸ್ ಠಾಣೆಯಲ್ಲಿ ತಮ್ಮ ಅಳಿಯ ಮಂಜುನಾಥನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಆಗಿನ ಪಿಎಸ್‍ಐ ರವೀಶ್, ವೃತ್ತ ನಿರೀಕ್ಷಕ ಎನ್.ಮಂಜುನಾಥ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆಯಿತು. 

ಆಟೋ ಚಾಲಕ ಮಂಜುನಾಥ ತನ್ನ ಹೆಂಡತಿಯ ಶೀಲ ಶಂಕಿಸಿ, ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಸಾಕ್ಷ್ಯಾದಾರಗಳಿಂದ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿ ಮಂಜುನಾಥನಿಗೆ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್ ತೀರ್ಪು ನೀಡಿದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News