×
Ad

ನಾಳೆ ಐದು ಕ್ಷೇತ್ರಗಳ ಉಪ ಸಮರದ ಫಲಿತಾಂಶ ಪ್ರಕಟ

Update: 2018-11-05 19:22 IST

ಬೆಂಗಳೂರು, ನ.5: ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟಿದ್ದ ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಮಂಗಳವಾರ(ನ.6ರಂದು) ಮಧ್ಯಾಹ್ನದ ವೇಳೆಗೆ ಹೊರ ಬೀಳಲಿದ್ದು, ಆಡಳಿತರೂಢ ಜೆಡಿಎಸ್-ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಯಾರ ಪರವಾಗಿ ಮತದಾರ ಪ್ರಭು ತನ್ನ ತೀರ್ಪು ನೀಡಿದ್ದಾನೆ ಎಂಬುದು ಬಹಿರಂಗಗೊಳ್ಳಲಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಸಹ್ಯಾದ್ರಿ ಕಾಲೇಜು, ಮಂಡ್ಯ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಸರಕಾರಿ ಕಾಲೇಜು, ಜಮಖಂಡಿ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಮಿನಿ ವಿಧಾನಸೌಧ, ರಾಮನಗರ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇರಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿರುವ ಮತಗಳ ಎಣಿಕೆ ಕಾರ್ಯವು ಬಹುತೇಕ ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳಲಿದೆ. ಐದು ಕ್ಷೇತ್ರಗಳಲ್ಲಿ ಮತಗಳ ಎಣಿಕೆ ಕಾರ್ಯಕ್ಕೆ ಅಗತ್ಯವಿರುವ ವ್ಯವಸ್ಥೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತಲು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಿದೆ.

ಐದು ಕ್ಷೇತ್ರಗಳ ಪೈಕಿ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಎಲ್ಲರ ಗಮನ ಸೆಳೆದಿದೆ. ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿದಿದ್ದು, ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಎದುರಾಗಿದೆ.

ಅದೇ ರೀತಿ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಚುನಾವಣಾ ಕಣದಲ್ಲಿದ್ದರೂ, ಅಲ್ಲಿ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡುವಿನ ಹೋರಾಟವೆಂಬ ರೀತಿಯಲ್ಲೆ ಬಿಂಬಿಸಲಾಗುತ್ತಿದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮತದಾನದ ಒಂದು ದಿನ ಮುನ್ನ ಕಣದಿಂದ ಹಿಂದಕ್ಕೆ ಸರಿದಿರುವುದು ಆಡಳಿತರೂಢ ಕಾಂಗ್ರೆಸ್-ಜೆಡಿಎಸ್‌ಗೆ ವರವಾಗಿ ಪರಿಣಮಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಇರುವುದು ಹಾಗೂ ಬಿಜೆಪಿಗೆ ನೆಲೆ ಇಲ್ಲದಿರುವುದರಿಂದ, ಅಲ್ಲಿ ಏಕಮುಖ ಸ್ಪರ್ಧೆ ಎಂದೇ ಬಿಂಬಿಸಲಾಗಿದೆ. ಜಮಖಂಡಿಯಲ್ಲಿ ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ನ್ಯಾಮಗೌಡ ಅನುಕಂಪದ ಆಧಾರದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ಐದು ಕ್ಷೇತ್ರಗಳ ಫಲಿತಾಂಶವು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪಾಲಿಗೆ ಪ್ರತಿಷ್ಠೆಯಾಗಿದ್ದು, ಈ ಚುನಾವಣಾ ಫಲಿತಾಂಶವು ಮೈತ್ರಿ ಸರಕಾರಕ್ಕೆ ಇರುವ ಜನಬೆಂಬಲದ ಪ್ರತೀಕವಾಗಲಿದೆ ಎನ್ನಲಾಗಿದೆ. ಅದೇ ರೀತಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂಬ ಹುಮ್ಮಸ್ಸಿನಲ್ಲಿರುವ ಪ್ರತಿ ಪಕ್ಷ ಬಿಜೆಪಿಗೂ ಈ ಫಲಿತಾಂಶ ಮಹತ್ವದ್ದಾಗಿದೆ. ಮತದಾರರು ಯಾರ ಕೊರಳಿಗೆ ವಿಜಯ ಮಾಲೆ ಹಾಕಲಿದ್ದಾರೆ ಎಂಬುದು ಮಂಗಳವಾರ ಸ್ಪಷ್ಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News