ಎಚ್1ಎನ್1 ಔಷಧಗಳ ಕೊರತೆ ಇಲ್ಲ: ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ನ. 5: ರಾಜ್ಯದಲ್ಲಿ ಎಚ್-1 ಎನ್-1 ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಲಾಗಿದ್ದು, ಅಗತ್ಯ ಔಷಧಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲಾಸ್ಪತ್ರೆಗಳಿಗೆ ಪೂರೈಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಚ್1 ಎನ್1ನಿಂದ ಕಳೆದ ವರ್ಷ 17ಮಂದಿ ಅಸುನೀಗಿದ್ದು, ಇದುವರೆಗೂ 19ಮಂದಿ ಮೃತಪಟ್ಟಿದ್ದಾರೆಂದು ದೃಢಪಟ್ಟಿದೆ. ಎಚ್1 ಎನ್1 ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದ್ದು, ಚಿಕಿತ್ಸೆ ನೀಡುವ ವೈದ್ಯರಿಗೆ ಮೊದಲೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ ಎಂದರು.
ಬೆಂಗಳೂರು ನಗರದಲ್ಲಿ ಎಚ್-1 ಎನ್-1 ರೋಗ ನಿಯಂತ್ರಣಕ್ಕೆ ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಭೆ ನಡೆಸಿದ್ದು, ಅಗತ್ಯ ಮುಂಜಾಗ್ರತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಚ್-1 ಎನ್-1 ರೋಗ ನಿಯಂತ್ರಣದಲ್ಲಿದ್ದು, ಈ ತಿಂಗಳ ಅಂತ್ಯದ ವೇಳೆಗೆ ರೋಗ ಸಂಪೂರ್ಣ ಕಡಿಮೆಯಾಗಲಿದೆ. ರೋಗದ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರ ಬಳಿಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಶಿವಾನಂದ ಪಾಟೀಲ್ ಸೂಚಿಸಿದರು.