×
Ad

ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ: ಹಲವರಿಗೆ ನೊಟೀಸ್ ನೀಡಿದ ಕೊಡಗು ಪೊಲೀಸ್

Update: 2018-11-05 23:16 IST

ಮಡಿಕೇರಿ, ನ.5 : ಟಿಪ್ಪು ಜಯಂತಿ ಆಚರಣೆ ಸಂದರ್ಭ ಕೋಮು ಸೌಹಾರ್ದ ಕಾಪಾಡುವ ಸಲುವಾಗಿ ಶಾಂತಿ ಭಂಗ ಉಂಟು ಮಾಡುವವರ ವಿರುದ್ಧ ಎಚ್ಚರಿಕೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಇದರಂತೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 155 ಮಂದಿಗೆ ಪೊಲೀಸರು ನೋಟಿಸ್ ನೀಡಿ ತಹಶೀಲ್ದಾರ್ ಸಮ್ಮುಖದಲ್ಲಿ ಮುಚ್ಚಳಿಕೆ ಬರೆದು ಕೊಡುವಂತೆ ಸೂಚನೆ ನೀಡಿತ್ತು. ನೋಟಿಸ್ ಪಡೆದುಕೊಂಡು ಹಲವು ಮಂದಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಂದರ್ಭ ತಹಶೀಲ್ದಾರ್ ಕಚೇರಿಯಲ್ಲಿ ಇಲ್ಲದಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಡಿಕೇರಿಯಲ್ಲಿ ನಡೆಯಿತು.

ಪೊಲೀಸರು ಟಿಪ್ಪು ಜಯಂತಿಯ ಹೆಸರಲ್ಲಿ ಮನ ಬಂದವರ ಮೇಲೆ ರೌಡಿ ಕೇಸ್ ದಾಖಲಿಸಿದ್ದಾರೆ. ರೌಡಿಗಳೆಲ್ಲರೂ ರಸ್ತೆಯಲ್ಲಿ ನಿರ್ಭಯದಿಂದ ತಿರುಗುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದೆ, ಯಾವುದೇ ಪ್ರಕರಣದಲ್ಲಿ ಹೆಸರಿಲ್ಲದವರ ಮೇಲೆ ಕ್ರಮ ಜರುಗಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯುವಕರು ಮ್ತತು 80 ವರ್ಷ ಪ್ರಾಯದ ವಯೋವೃದ್ದರ ಮೇಲೆಯೂ ಶಾಂತಿ ಭಂಗದ ಆರೋಪ ಹೊರಿಸಲಾಗಿದೆ. ಶಾಂತಿ ಭಂಗಕೋರರ ಮೇಲೆ ಕ್ರಮ ಕೈಗೊಳ್ಳುವ ಬದಲು ಅಮಾಯಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದರು.

ಬಳಿಕ ಕಚೇರಿಗೆ ಆಗಮಿಸಿದ ತಹಶೀಲ್ದಾರ್ ಕುಸುಮ ಸುದ್ದಿಗಾರರೊಂದಿಗೆ ಮಾತನಾಡಿ, ನೊಟೀಸ್ ಪೊಲೀಸ್ ಇಲಾಖೆಯಿಂದ ನೀಡಲಾಗಿದೆ. ನೊಟೀಸ್ ಪಡೆದುಕೊಂಡವರ ಪೂರ್ವಪರ ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಮಜಾಯಿಷಿಕೆ ನೀಡಿದರು.

ವಕೀಲ ಕೃಷ್ಣಮೂರ್ತಿ ಮಾತನಾಡಿ, ಟಿಪ್ಪು ಜಯಂತಿಯ ಹೆಸರಲ್ಲಿ ಅಮಾಯಕರಿಗೆ ತಹಶೀಲ್ದಾರ್ ಕಚೇರಿ ಅಲೆಯುವ ಶಿಕ್ಷೆ ವಿಧಿಸಲಾಗಿದೆ. ಬಹುತೇಕರು ಕೂಲಿ ಕಾರ್ಮಿಕರಾಗಿದ್ದು ದುಡಿಮೆ ಬಿಟ್ಟು ಬಂದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಡವರ ಕಣ್ಣೀರು ಕಾಣದಾಗಿದೆ ಎಂದು ಆರೋಪಿಸಿದರು. 

ನಾಪೋಕ್ಲುವಿನ ಬದ್ರುದ್ದೀನ್ ಮಾತನಾಡಿ ಗೌರಿ ಗಣೇಶ, ರಂಜಾನ್, ಬಕ್ರೀದ್, ಕ್ರಿಸ್‍ಮಸ್, ಎಲೆಕ್ಷನ್ ಹೀಗೆ ಪ್ರತಿಯೊಂದಕ್ಕೂ ತಹಶೀಲ್ದಾರ್ ಕಚೇರಿ ಪೊಲೀಸ್ ಠಾಣೆಗೆ ಅಲೆಯುತ್ತಿದ್ದೇನೆ. 14 ವರ್ಷದ ಹಿಂದಿನ ಪಿಟಿಕೇಸ್‍ಗೆ ಶಾಂತಿ ಭಂಗದ ಆರೋಪ ಹೊರಿಸಿದ್ದಾರೆ. ನಾನು ಇಂದಿನವರೆಗೂ ಟಿಪ್ಪು ಜಯಂತಿಗೆ ಹೋಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News