ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ತುಮಕೂರು ಜಿಲ್ಲೆ ಪ್ರಥಮ

Update: 2018-11-05 18:18 GMT

ತುಮಕೂರು,ನ.5: ಕಂದಾಯ ಇಲಾಖೆಯಲ್ಲಿ ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳ ವಿಲೇವಾರಿಯ ಪ್ರಗತಿಯಲ್ಲಿ ರಾಜ್ಯದ ಇತರೆ ಜಿಲ್ಲೆಗಳನ್ನು ಹಿಂದಿಕ್ಕಿ ತುಮಕೂರು ಜಿಲ್ಲೆ ರ್ಯಾಂಕಿಂಗ್‍ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. 

ಸಕಾಲ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವುದರಲ್ಲಿ 6ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೇರಿಸಲೇಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಕೆ. ಅವರು ಪಣ ತೊಟ್ಟ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಗೆ ಪ್ರಥಮಸ್ಥಾನ ಸಿಕ್ಕಿದೆ.

ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಕಾರ್ಯ ವೈಖರಿಗೆ ಸ್ವಲ್ಪ ವೇಗ ನೀಡಿದರು. ಪ್ರತಿ ಸೋಮವಾರ ಬೆಳಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಗಳು ಸರ್ವೆ ಇಲಾಖೆಯ ಮೇಲ್ವಿಚಾರಕರು, ಸಕಾಲ, ಭೂಮಿ, ನಾಡಕಚೇರಿಯ ಸಿಬ್ಬಂದಿಗಳೊಂದಿಗೆ ನೇರವಾಗಿ ವೀಡಿಯೋ ಸಂವಾದ ನಡೆಸುತ್ತಿದ್ದರು. ಸಕಾಲ ಯೋಜನೆಯಡಿ ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಯಾವ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳು, ವಿಲೇವಾರಿ ಮಾಡಲು ಇರುವ ತಾಂತ್ರಿಕ ತೊಂದರೆಗಳು ಏನು? ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಜಿಲ್ಲಾಧಿಕಾರಿಗಳು, ವಿಲೇವಾರಿಗೆ ಕಾಲನಿಗದಿ ಮಾಡಿ ಕೆಳಹಂತದ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿಗೆ ಮಾರ್ಗದರ್ಶನ ನೀಡುತ್ತಿದ್ದರು. 

ಈ ರೀತಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಕಾಲ ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸುತ್ತಿದ್ದ ಜಿಲ್ಲಾಧಿಕಾರಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಿಲ್ಲೆಯ ತಾಲೂಕು ಕೇಂದ್ರದಲ್ಲಿರುವ ಅಧಿಕಾರಿಗಳು ಕೇಂದ್ರ ಸ್ಥಾನಕ್ಕೆ ಬರಲು ವ್ಯಯವಾಗುತ್ತಿದ್ದ ಸಮಯವನ್ನು ಉಳಿತಾಯ ಮಾಡಿ, ಅವರಿಂದ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸಲು ಪ್ರೇರೇಪಿಸಿ ಸಕಾಲದಲ್ಲಿ ತುಮಕೂರು ಜಿಲ್ಲೆಗೆ ಪ್ರಥಮಸ್ಥಾನ ಬರಲು ಕಾರಣೀಭೂತರಾಗಿದ್ದಾರೆ. 

ಸಕಾಲದ ಅರ್ಜಿಗಳ ವಿಲೇವಾರಿಗಳ ಪ್ರಗತಿಯ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ಪಡೆಯುತ್ತಿದ್ದ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ವಿಲೇವಾರಿ ಪ್ರಗತಿಯಲ್ಲಿ ಕುಂಠಿತವಾಗುತ್ತಿದ್ದ ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿ, ಶೀಘ್ರ ವಿಲೇವಾರಿಗೆ ಕ್ರಮವಹಿಸುತ್ತಿದ್ದರು. ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ತೆಗೆದುಕೊಂಡ ಆಸಕ್ತಿ ಹಾಗೂ ಆಡಳಿತ ಯಂತ್ರಕ್ಕೆ ನೀಡಿದ ಚುರುಕುತನದಿಂದಾಗಿ ಕಂದಾಯ ಇಲಾಖೆಯ ಸಕಾಲ ಅರ್ಜಿಗಳ ವಿಲೇವಾರಿಯ ಪ್ರಗತಿಯಲ್ಲಿ ತುಮಕೂರು ಜಿಲ್ಲೆಯನ್ನು ಪ್ರಥಮ ಸ್ಥಾನ ಲಭಿಸಿದೆ. 

ಪ್ರಥಮ ಸ್ಥಾನದಲ್ಲಿದ್ದ ಬಾಗಲಕೋಟೆ ಜಿಲ್ಲೆಯನ್ನು ಹಿಂದಿಕ್ಕಿರುವ ತುಮಕೂರು ಜಿಲ್ಲೆಯು ರ್ಯಾಂಕಿಂಗ್‍ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದ್ದು, ಬೆಂಗಳೂರು ನಗರವು ಸಕಾಲ ಅರ್ಜಿ ವಿಲೇವಾರಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News