ಬಿಜೆಪಿಯು ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದೆ: ಸಂಸದ ಧ್ರುವನಾರಾಯಣ

Update: 2018-11-05 18:25 GMT

ಚಾಮರಾಜನಗರ,ನ.5: ಬಿಜೆಪಿ ಸರ್ಕಾರ ತನ್ನ ಬೇಳೆ ಬೇಯಿಸಲು ಧರ್ಮಧರ್ಮಗಳನ್ನು ಎತ್ತಿಕಟ್ಟಿದರೆ ಕಾಂಗ್ರೆಸ್ ಅಭಿವೃದ್ದಿ ಮಂತ್ರದಿಂದ ಜನತೆಯ ಹತ್ತಿರದಲ್ಲಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಾರ್ವತಾಂಭಾ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಭೂತ್ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಆಹಾರ ಭದ್ರತೆ, 72 ಸಾವಿರ ಕೋಟಿ ರೈತರ ಸಾಲ ಮನ್ನಾ, ನರೇಗಾ ಮೂಲಕ ಉದ್ಯೋಗ, ಅನ್ನಭಾಗ್ಯ, ಮಕ್ಕಳಿಗೆ ಉಚಿತ ಶಿಕ್ಷಣದಂತಹ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ. ಆದರೆ ಬಿಜೆಪಿ ಮಾತ್ರ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಾ ಯಾವುದೇ ಜನಪರ ಕೆಲಸಗಳನ್ನು ಮಾಡಿಲ್ಲ. ಪಟೇಲ್ ಪ್ರತಿಮೆ, ರಾಮ ಮಂದಿರ ನಿರ್ಮಾಣ, ಟಿಪ್ಪುಜಯಂತಿ ಆಚರಣೆ ವಿರೋಧ ಮಾಡುತ್ತಾ ಪ್ರಚೋದನಾ ಕಾರ್ಯದಲ್ಲಿ ತೊಡಗಿದ್ದು, ಜನಪರ ಯೋಜನೆ ಮರೆತಿದ್ದಾರೆ ಎಂದರು.

ಜಿಲ್ಲೆಯ ಕ್ಯಾಪ್ಟನ್ ಆಗಿದ್ದ ದಿ.ಎಚ್.ಎಸ್.ಮಹದೇವಪ್ರಸಾದ್ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದರು. ಅವರ ಕಾರ್ಯಗಳಿಗೆ ನಾನೂ ಸಹಾ ಸಂಸದರ ನಿಧಿಯಿಂದ ಹೆಚ್ಚಿನ ಅನುದಾನ ನೀಡಿದ್ದೆ. ಅವರ ಪತ್ನಿ ಡಾ.ಗೀತಾಮಹದೇವಪ್ರಸಾದ್ ರ ಸಹಕಾರ ಹಾಗೂ ಕೈ ಕಾರ್ಯಕರ್ತರ ಪ್ರಾಮಾಣಿಕ ದುಡಿಮೆಯಿಂದ ಗೆಲುವು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಡಾ.ಯತೀಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುತ್ತಿದ್ದು, ಬಿಜೆಪಿ ಕೇವಲ ಮೇಲ್ವರ್ಗದವರನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ಜನಸಾಮಾನ್ಯರ ಕ್ಷೇಯೋಭಿವೃದ್ದಿ ಗಮನವಿಲ್ಲದ ಬಿಜೆಪಿ ಆರೆಸ್ಸೆಸ್ ಜತೆಗೂಡಿ ಧರ್ಮದ ವಿಷಬೀಜ ಬಿತ್ತುತ್ತಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ಎಲ್ಲಾ ಸಂಚುಗಳನ್ನು ಮತದಾರರಿಗೆ ಮನವರಿಕೆ ಮಾಡಬೇಕು ಎಂದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಂಸದ ಎ.ಸಿದ್ದರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮೈಸೂರು ಕಾರ್ಪೊರೇಟರ್ ಶಾಂತಕುಮಾರಿ ಮಾತನಾಡಿದರು.

ತಾಪಂ ಅಧ್ಯಕ್ಷ ಜಗದೀಶಮೂರ್ತಿ, ಎಪಿಎಂಸಿ ಅಧ್ಯಕ್ಷ ಕರಕಲಮಾದಹಳ್ಳಿ ಪ್ರಭುಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಜಿಪಂ ಸದಸ್ಯ ಮಹೇಶ್, ಚನ್ನಪ್ಪ, ಬೊಮ್ಮಯ್ಯ, ಕೆರೆಹಳ್ಳಿನವೀನ್, ಚಾಮುಲ್ ಹಾಗೂ ಮೈಮುಲ್ ನಿರ್ದೇಶಕರು ಮತ್ತು ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ರಾದ ಬಿ.ಎಂ.ಮುನಿರಾಜು ಮತ್ತು ರಾಜಶೇಖರ್ ಹಾಗೂ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News