ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ಶಿವರಾಮೇಗೌಡರಿಗೆ ಭರ್ಜರಿ ಗೆಲುವು

Update: 2018-11-06 13:16 GMT

ಬೆಂಗಳೂರು, ನ.6: ರಾಜ್ಯ ಉಪ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ನ ಶಿವರಾಮೇಗೌಡ, ರಾಮನಗರದಲ್ಲಿ ಜೆಡಿಎಸ್ ನ ಅನಿತಾ ಕುಮಾರ ಸ್ವಾಮಿ ಭಾರೀ ಅಂತರದಲ್ಲಿ ಗೆಲುವು  ಸಾಧಿಸಿದ್ದಾರೆ. ಜಮಖಂಡಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಆನಂದ್ ನ್ಯಾಮ ಗೌಡ ಗೆಲುವು ದಾಖಲಿಸಿದ್ದಾರೆ.

ಬಳ್ಳಾರಿಯಲ್ಲಿ ಕಾಂಗ್ರೆಸ್ ನ ವಿ.ಎಸ್. ಉಗ್ರಪ್ಪ ಅವರು  ಬಿಜೆಪಿಯ ಜೆ. ಶಾಂತಾ ವಿರುದ್ಧ 1.5 ಲಕ್ಷ  ಮತಗಳ  ಅಂತರದಿಂದ ಗೆಲುವಿನ ನಗೆ  ಬೀರಿದ್ದಾರೆ. ಇದರೊಂದಿಗೆ  ಸೋನಿಯಾ ಗಾಂಧಿ, ಶ್ರೀರಾಮುಲು ದಾಖಲೆಯನ್ನು ಅವರು  ಮುರಿದಿದ್ದಾರೆ. 

ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲುವಿನ ನಗೆಬೀರಿದ್ದಾರೆ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ಶಿವರಾಮೇಗೌಡರು, ನಂತರ ಸತತ ಸೋಲುಂಡು ಸುಮಾರು 24 ವರ್ಷಗಳ ರಾಜಕೀಯ ವನವಾಸ ಅನುಭವಿಸಿ ಪ್ರಥಮ ಬಾರಿಗೆ ಸಂಸತ್ ಪ್ರವೇಶ ಪಡೆದಿದ್ದಾರೆ.

ಉಪ ಚುನಾವಣೆಯಲ್ಲಿ ಎಲ್.ಆರ್. ಶಿವರಾಮೇಗೌಡ ಅವರು 5,69,347 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರಿಗಿಂತ 3,24,943 ಹೆಚ್ಚು ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ 2,44,404 ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಮಂಡ್ಯದಲ್ಲಿ ನೆಲೆಯಿಲ್ಲದ ಪಕ್ಷವೆಂದೇ ಬಿಂಬಿತವಾಗಿದ್ದ ಬಿಜೆಪಿ ಸಹ ಈ ಉಪ ಚುನಾವಣೆಯಲ್ಲಿ ಸೋತರೂ ಹೆಚ್ಚು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿರುವುದು ಹೊಸ ಬೆಳವಣಿಗೆಯಾಗಿದೆ. 

ಜೆಡಿಎಸ್ ಜತೆ ಮೈತ್ರಿಗೆ ಬಹುತೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತಸಂಘ ವಿರೋಧ ವ್ಯಕ್ತಪಡಿಸಿದ್ದು, ಹಾಗಾಗಿ ಎದುರಾಳಿ ಬಿಜೆಪಿ ಅಭ್ಯರ್ಥಿ ಮತಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಬೇರೆ ಕಾರಣವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಅಂಬರೀಶ್ ದಾಖಲೆ ಮುರಿದ ಶಿವರಾಮೇಗೌಡ
ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ 3,24,943 ಮತಗಳ ಅಂತರದಿಂದ ಗೆಲುವು ಪಡೆದಿರುವ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಅಂಬರೀಶ್ ಅವರ ದಾಖಲೆಯನ್ನು ಮುರಿದಿದ್ದಾರೆ.

1998ರ ಲೋಕಸಭಾ ಚುನಾವಣೆಯಲ್ಲಿ ಜನತಾ ದಳದ ಅಂಬರೀಶ್, ಕಾಂಗ್ರೆಸ್‍ನ ಜಿ.ಮಾದೇಗೌಡರನ್ನು 1,80,523 ಮತಗಳಿಂದ ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಅಂಬರೀಶ್ ಜೆಡಿಎಸ್‍ನ ಕೆ.ಆರ್.ಪೇಟೆ ಕೃಷ್ಣ ವಿರುದ್ಧ 1,52,18 ಮತಗಳಿಂದ ಹಾಗೂ 2004ರಲ್ಲಿ ಜೆಡಿಎಸ್‍ನ ಡಾ.ಎನ್.ಎನ್.ರಾಮೇಗೌಡರ ವಿರುದ್ಧ 1,24,438 ಮತಗಳನ್ನು ಪಡೆದಿದ್ದರು.

1989 ಮತ್ತು 1994ರಲ್ಲಿ ಪಕ್ಷೇತರರಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಎಲ್.ಆರ್.ಶಿವರಾಮೇಗೌಡ ಗೆದ್ದಿದ್ದರು. ನಂತರ, ಸತತ ಸೋಲು ಕಂಡಿದ್ದರು. ಈಗ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಪಡೆದು ನಾಗಮಂಗಲ ತಾಲೂಕಿನ ಎರಡನೇ ಸಂಸದ ಎನಿಸಿಕೊಂಡಿದ್ದಾರೆ. ಎನ್.ಚಲುವರಾಯಸ್ವಾಮಿ 2009ರಲ್ಲಿ ಸಂಸತ್‍ಗೆ ಆಯ್ಕೆಯಾಗಿ ನಾಗಮಂಗಲ ತಾಲೂಕಿನ ಮೊದಲ ಸಂಸದರೆನಿಸಿಕೊಂಡಿದ್ದರು. 

ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಬೇರು ಗಟ್ಟಿಯಾಗಿದೆ ಎಂಬುದನ್ನು ಹಾಗೂ ಕಾಂಗ್ರೆಸ್-ಜೆಡಿಎಸ್ ಜತೆಯಲ್ಲಿ ಹೊರಟರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಫಲಿತಾಂಶ ತೋರಿಸಿಕೊಟ್ಟಿದೆ.  ಇದು 2019ರ ಚುನಾವಣೆಗೆ ದಿಕ್ಸೂಚಿಯಾಗಿದೆ. ಮತದಾರರ ಸೇವೆಗೆ ಸದಾ ಸಿದ್ದನಿದ್ದೇನೆ.
-ಎಲ್.ಆರ್.ಶಿವರಾಮೇಗೌಡ, ಮಂಡ್ಯ ವಿಜೇತ ಅಭ್ಯರ್ಥಿ. 

ಜೆಡಿಎಸ್-ಮೈತ್ರಿ ನಡುವೆಯೂ ಮತದಾರರು ಹೆಚ್ಚು ಮತ ನೀಡಿ ಮಂಡ್ಯದಲ್ಲಿ ಬಿಜೆಪಿಗೂ ನೆಲೆಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ಪಕ್ಷ ಸಂಘಟನೆಗೆ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ.
-ಡಾ.ಸಿದ್ದರಾಮಯ್ಯ, ಮಂಡ್ಯ ಬಿಜೆಪಿ ಪರಾಜಿತ ಅಭ್ಯರ್ಥಿ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಗೆಲ್ಲಿಸುವ ಮೂಲಕ ಜನತೆ ಸಮ್ಮಿಶ್ರ ಸರಕಾರದ ಬೆನ್ನುತಟ್ಟಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನಮ್ಮ ಪಕ್ಷದ ಕೆಲವು ಒಲ್ಲದ ಮನಸ್ಸಿನವರು ಬಿಜೆಪಿಗೆ ಓಟು ಹಾಕಿದ್ದಾರೆ. ಹಾಗಾಗಿ ಅವು ನಮ್ಮ ಓಟುಗಳೆ.

-ಸಿ.ಎಸ್.ಪುಟ್ಟರಾಜು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News