ತುಮಕೂರು: ಯುವ ಕಾಂಗ್ರೆಸ್ ಉಪಾಧ್ಯಕ್ಷರ ಅಮಾನತು ಖಂಡಿಸಿ ಪ್ರತಿಭಟನೆ

Update: 2018-11-07 11:28 GMT

ತುಮಕೂರು.ನ.07: ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಅವರನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿರುವ ಪಕ್ಷದ ಕ್ರಮವನ್ನು ಖಂಡಿಸಿ, ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು ಯುವ ಕಾಂಗ್ರೆಸ್ ಕಾರ್ಯಕರ್ತರು, ಸಾಮೂಹಿಕವಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಟೌನ್‍ಹಾಲ್ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ಅವರ ನೇತೃತ್ವದಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಆರ್.ರಾಜೇಂದ್ರ ಅವರನ್ನು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ, ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಮನವಿಯನ್ನು ಜಿಲ್ಲಾಧ್ಯಕ್ಷರಾದ ಆರ್.ರಾಮಕೃಷ್ಣ ಮೂಲಕ ಸಲ್ಲಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶರತ್‍ ಕುಮಾರ್ ಪ್ರತಿಭಟನಾ ನಿರತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಆರ್.ರಾಜೇಂದ್ರ ಅವರು ಕಳೆದ 10 ವರ್ಷಗಳಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಹಲವಾರು ಹೋರಾಟಗಳನ್ನು ನಡೆಸಿ, ಪಕ್ಷವನ್ನು ಜಿಲ್ಲೆಯಲ್ಲಿ ಸದೃಢವಾಗಿ ಕಟ್ಟಲು ಶ್ರಮಿಸಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹವರನ್ನು ಏಕಾಏಕಿ ಯಾವುದೇ ಕಾರಣ ನೀಡದೆ ಪಕ್ಷದ ವರಿಷ್ಠರು ಅಮಾನತು ಮಾಡಿರುವುದು ಸರಿಯಲ್ಲ. ಕೂಡಲೇ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಹಾಗೂ ಇದೇ ರೀತಿ ಬೇರೆ ಬೇರೆ ಜಿಲ್ಲೆಗಳಿಂದ ಅಮಾನತಾಗಿರುವ ಪಕ್ಷದ ಯುವ ಮುಖಂಡರ ಮೇಲಿನ ಅಮಾನತು ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಪಕ್ಷದ ನಿಷ್ಠಾವಂತ ಯುವ ಮುಖಂಡರರನ್ನು ಪಕ್ಷವು ಲೋಕಸಭಾ ಚುನಾವಣೆಯ ವೇಳೆ ಕಳೆದುಕೊಳ್ಳಲಿದೆ. ಇದು ಪಕ್ಷಕ್ಕೆ ಬಾರಿ ಹೊಡೆತ ನೀಡಲಿದೆ ಎಂಬುದನ್ನು ಪಕ್ಷದ ಹಿರಿಯ ಮುಖಂಡರು ಅರ್ಥ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಸುಮಂತ್ ಪ್ರಭು ಮಾತನಾಡಿ, 2013ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಂದಿನ ಬಿಜೆಪಿ ಸರಕಾರ ಆಧಾರ್ ಕಾರ್ಡ್ ನೀಡುವಲ್ಲಿ ತೋರಿದ ವಿಳಂಬ ನೀತಿಯ ವಿರುದ್ಧ ಜಿಲ್ಲೆಯ ಗಡಿಭಾಗ ತಿಪಟೂರಿನಿಂದ ತುಮಕೂರು ಜಿಲ್ಲಾ ಕೇಂದ್ರದವರೆಗೆ ಸುಮಾರು 70 ಕಿ.ಮಿ. ಪಾದಯಾತ್ರೆ ನಡೆಸುವುದರ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಪಡೆದು ಅಧಿಕಾರ ಬರಲು ಕಾರಣರಾದವರು ಯುವ ಕಾಂಗ್ರೆಸ್ ಕಾರ್ಯಕರ್ತರು. ಯಾವುದೇ ಸಕಾರಣ ವಿಲ್ಲದೆ ಅಮಾನತು ಮಾಡುವ ಮೂಲಕ ಪಕ್ಷ ಯುವ ಪಡೆಯನ್ನು ತುಳಿಯಲು ಹೊರಟಿದೆ. ಇದನ್ನು ವಿರೋಧಿಸಿ ಎಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅಲ್ಲದೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪಕ್ಷದ ಹೈಕಮಾಂಡ್ ಕ್ರಮವನ್ನು ಖಂಡಿಸಿ, ಪ್ರತಿಭಟನೆ ನಡೆಸಲಿದ್ದು, ಅಮಾನತು ಆದೇಶ ಹಿಂಪಡೆಯುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಶಶಿಹುಲಿಕುಂಟೆ ಮಠ್, ರವಿ, ವಸಂತ್, ವಕೀಲರಾದ ನಾರಾಯಣಗೌಡ, ಎಪಿಎಂಸಿ ನಿರ್ದೇಶಕ ಸುರೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ದೊಡ್ಡಮನೆ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News