ರೈತರಿಗೆ 40 ಸಾವಿರ ಎಕರೆ ಭೂಮಿ ಹಿಂದಿರುಗಿಸಲು ರಾಜ್ಯ ಸರಕಾರ ಚಿಂತನೆ
ಬೆಂಗಳೂರು, ನ.7: ಕೈಗಾರಿಕೆಗಳ ಸ್ಥಾಪನೆ ಮಾಡುವ ಉದ್ದೇಶದಿಂದ ರೈತರಿಂದ ಸ್ವಾಧೀನ ಮಾಡಿಕೊಂಡು ಬಳಸದೇ ಖಾಲಿ ಬಿಟ್ಟಿದ್ದ ಸುಮಾರು 40 ಸಾವಿರ ಎಕರೆ ಭೂಮಿಯನ್ನು ರೈತರಿಗೆ ಹಿಂದುರಿಗಿಸಲು ರಾಜ್ಯ ಸರಕಾರ ಮುಂದಾಗಿದೆ.
ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಭೂ ಬ್ಯಾಂಕ್ ಸ್ಥಾಪಿಸಲು ಸರಕಾರ 1.21 ಲಕ್ಷ ಎಕರೆ ಭೂಮಿಯನ್ನು ಗುರುತಿಸಿತ್ತು. ಆದರೆ ಈ ಒಟ್ಟು ಭೂಮಿಯಲ್ಲಿ ಅರ್ಧದಷ್ಟು ಜಮಿನನ್ನು ಸ್ವಾಧೀನ ಮಾಡಿಕೊಳ್ಳಲಿಲ್ಲ. ಅಲ್ಲದೆ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರಲ್ಲೇ ಬಹಳಷ್ಟು ಭೂಮಿ ಬಳಕೆಗೆ ಅಂತಿಮ ಅಧಿಸೂಚನೆ ಹೊರಬೀಳದ ಪರಿಣಾಮ ರೈತರು ಅತಂತ್ರ ಸ್ಥಿತಿಗೆ ತಲುಪಿದ್ದರು. ಈ ಪರಿಸ್ಥಿತಿಯನ್ನು ಕೊನೆಗೂ ಮನಗಂಡಿರುವ ಸರಕಾರ ಕೈಗಾರಿಕೆಗಳ ಸ್ಥಾಪನೆಯಾಗಲ್ಲ ಎಂದು ಭೂಮಿಯನ್ನು ವಾಪಸ್ಸು ನೀಡಲು ತೀರ್ಮಾನಿಸಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಈವರೆಗೆ ನಾಲ್ಕು ಹೂಡಿಕೆದಾರರ ಸಮಾವೇಶಗಳು ನಡೆದಿವೆ. ಹೂಡಿಕೆಗಾಗಿ ಒಪ್ಪಂದ ಮಾಡಿಕೊಳ್ಳುವವರಿಗೆ ಭೂಮಿ ಒದಗಿಸುವ ಸಲುವಾಗಿಯೆ ಭೂ ಬ್ಯಾಂಕ್ ಸ್ಥಾಪಿಸಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇದಕ್ಕಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತದೆ. ಹೆಚ್ಚು ಕೈಗಾರಿಕೆಗಳನ್ನು ಆಹ್ವಾನಿಸಿ ನಿರುದ್ಯೋಗ ಸಮಸ್ಯೆ ತಗ್ಗಿಸಬೇಕೆಂಬ ಉದ್ದೇಶದಿಂದ ಸರಕಾರ ಭೂ ಬ್ಯಾಂಕ್‌ಗಾಗಿ ರಾಜ್ಯಾದ್ಯಂತ 1,21,286 ಎಕರೆ ಭೂಮಿಯನ್ನು ಗುರುತು ಮಾಡಿದ್ದು, ಅದರಲ್ಲಿ 1,06,889 ಎಕರೆ ಖಾಸಗಿ ಜಮೀನಾಗಿದೆ.
ಪಟ್ಟಿ ಸಿದ್ಧತೆ: ಅಭಿವೃದ್ಧಿಪಡಿಸದ 30 ಸಾವಿರ ಎಕರೆ ಹಾಗೂ ಅಂತಿಮ ಅಧಿಸೂಚನೆಯಾಗಿಯೂ ಬಳಕೆಯಾಗದ ಭೂಮಿ ಸೇರಿ 40 ಸಾವಿರ ಎಕರೆಯಲ್ಲಿ ಎಷ್ಟು ಭೂಮಿ ಕೈಗಾರಿಕಾ ಸ್ಥಾಪನೆಗೆ ಕಾರ್ಯಸಾಧು ಎಂಬುದನ್ನು ಪಟ್ಟಿ ಮಾಡಲು ಸರಕಾರ ಕೆಐಎಡಿಬಿಗೆ ಸೂಚನೆ ನೀಡಿದೆ. ಎಲ್ಲಿ ಕೈಗಾರಿಕೆ ಸ್ಥಾಪನೆ ಸಾಧ್ಯವೊ ಅಂತಹ ಭೂಮಿಯನ್ನಷ್ಟೆ ಉಳಿಸಿಕೊಳ್ಳಲಾಗುತ್ತದೆ.
ಕಾನೂನಿನಲ್ಲಿ ಏನಿದೆ: 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಐದು ವರ್ಷದೊಳಗೆ ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದರೆ ರೈತರಿಗೆ ವಾಪಸ್ ಮಾಡಬೇಕು. ರಾಜ್ಯದಲ್ಲಿ 2010-11ರಿಂದ ಭೂ ಬ್ಯಾಂಕ್‌ಗಾಗಿ ಭೂಮಿ ಗುರುತಿಸುವ ಹಾಗೂ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಕಾರ್ಯ ನಡೆದಿದೆ.
ಭೂಮಿ ಕತೆ ಏನಾಗಿದೆ: ಸರಕಾರ ಗುರುತು ಮಾಡಿದ್ದ ಭೂಮಿಯಲ್ಲಿ 53,175 ಎಕರೆ ಭೂಮಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ 38,080 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ 21, 486 ಎಕರೆ ಭೂಮಿಯನ್ನಷ್ಟೇ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಭೂ ಬ್ಯಾಂಕ್ ಸ್ಥಾಪನೆಗೂ ಮೊದಲಿನಿಂದ ರಾಜ್ಯದಲ್ಲಿ 26,524 ಎಕರೆ ಭೂಮಿಯನ್ನು 14,435 ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಸರಕಾರದ ಪ್ರಕಾರ ಗುರುತಿಸಿದ ಭೂಮಿಯಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.
ರೈತರಿಗೇನು ಸಮಸ್ಯೆ?: ಯಾವುದೇ ಭೂಮಿಗೆ ಪ್ರಾಥಮಿಕ ಅಧಿಸೂಚನೆ ಸಿಕ್ಕ ಬಳಿಕ ರೈತರು ಆ ಭೂಮಿಯನ್ನು ಮಾರಲು, ಗುತ್ತಿಗೆ ನೀಡಲು, ಸಾಲಕ್ಕಾಗಿ ಅಡಮಾನವಿಡಲು ಅವಕಾಶವಿಲ್ಲ. ಅಲ್ಲದೆ, ಭೂಮಿಯಲ್ಲಿ ಯಾವುದೇ ಬದಲಾವಣೆಯನ್ನೂ ಮಾಡುವಂತಿಲ್ಲ. ಅಂತಿಮ ಅಧಿಸೂಚನೆ ಸಿಕ್ಕು, ಪರಿಹಾರ ಸಿಗದಿದ್ದರೂ ಭೂಮಿ ಮೇಲಿನ ಅಧಿಕಾರ ಕಳೆದುಕೊಳ್ಳುವರು.
ವಾಪಸ್ಸಿಗೆ ಕಾರಣ: ಅನೇಕ ಸ್ಥಳಗಳಲ್ಲಿ ಭೂಮಿಗೆ ಯಾವುದೇ ಸಂಪರ್ಕ ಇಲ್ಲ. ಮತ್ತೊಂದು ಕಡೆ ಉದ್ಯಮಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪ್ರಮುಖ ನಗರ ಕೇಂದ್ರಿತ ಸ್ಥಳಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ, ಕೈಗಾರಿಕೆಗಳು ಸ್ಥಾಪನೆಯಾಗದೇ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಭೂಮಿಯನ್ನು ಹಿಂದಕ್ಕೆ ನೀಡಲು ಸರಕಾರ ಚಿಂತಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.