×
Ad

ಟಿಪ್ಪು ಜಯಂತಿಗೆ ವಿರೋಧ: ನ.10ರಂದು ಸ್ವಯಂಪ್ರೇರಿತ ಕೊಡಗು ಬಂದ್‍ಗೆ ಕರೆ

Update: 2018-11-07 20:00 IST
ಸಾಂದರ್ಭಿಕ ಚಿತ್ರ

ಸೋಮವಾರಪೇಟೆ,ನ.7: ನ.10ರಂದು ನಡೆಯುವ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸಿ, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಸ್ವಯಂಪ್ರೇರಿತ ಕೊಡಗು ಬಂದ್‍ಗೆ ಕರೆ ಕೊಟ್ಟಿದೆ.

ಸಮಿತಿಯ ವತಿಯಿಂದ ನ.8ರಂದು ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲಿ ಪ್ರತಿಭಟನಾ ಮೆರವಣಿಯೊಂದಿಗೆ ಜಯಂತಿ ಕೈಬಿಡುವಂತೆ ಆಗ್ರಹಿಸಿ, ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ನ.9 ರಂದು ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 10 ರಂದು ಪ್ರತಿ ವರ್ಷದಂತೆ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚೇಂಬರ್ ಆಫ್ ಕಾಮರ್ಸ್, ಬಸ್, ವಾಹನ, ಆಟೋ ಮಾಲಕರ ಸಂಘ, ವಿವಿಧ ಸಂಘಸಂಸ್ಥೆಗಳು ಹಾಗೂ ಜಿಲ್ಲೆಯ ಜನತೆ ಬಂದ್‍ಗೆ ಬೆಂಬಲ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಸಾಮ್ರಾಜ್ಯಶಾಹಿ ರಾಜ, ಇವನಿಂದ ಮತಾಂತರವಾಗಿದೆ. ದೇವಾಲಯಗಳ ಧ್ವಂಸವಾಗಿದೆ. ಕೊಡವರ ಹತ್ಯೆ ನಡೆದಿದೆ. ಐನ್‍ ಮನೆಗಳಿಗೆ ಹಾನಿಯಾಗಿದೆ. ಇಂತಹ ಕ್ರೂರಿ ರಾಜನ ಜಯಂತಿ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಜೆಡಿಎಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬಂದರೆ, ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಈ ಹಿಂದೆ ಭರವಸೆ ನೀಡಿದ್ದರು. ಈಗಲೂ ಟಿಪ್ಪು ಜಯಂತಿಯನ್ನು ರದ್ದುಪಡಿಸಲು ಅವಕಾಶವಿದೆ ಎಂದು ಆಗ್ರಹಿಸಿದರು.

ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನತೆ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಟಿಪ್ಪು ಜಯಂತಿಯ ಹೆಸರಿನಲ್ಲಿ ಜಿಲ್ಲೆಯಲ್ಲಿ ಅಶಾಂತಿ ಸಂಭವಿಸಿದರೆ ಸರಕಾರ ಹಾಗೂ ಜಿಲ್ಲಾಡಳಿತ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಸ್.ಜಿ.ಮೇದಪ್ಪ, ಎಂ.ಎನ್.ಕುಮಾರಪ್ಪ, ಮನುಕುಮಾರ್ ರೈ, ಶರತ್‍ಚಂದ್ರ, ಎಸ್.ಆರ್.ಸೋಮೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News