ರಾಮನಗರ ಚುನಾವಣೆ: ಕಣದಿಂದ ಹಿಂದೆ ಸರಿದ ಚಂದ್ರಶೇಖರ್ ನಡೆಗೆ ತಂದೆ ಸಿ.ಎಂ.ಲಿಂಗಪ್ಪ ಕ್ಷಮೆಯಾಚನೆ
ರಾಮನಗರ, ನ.7: ರಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಅಂತಿಮ ಕ್ಷಣದಲ್ಲಿ ಹಿಂದಕ್ಕೆ ಸರಿದ ಚಂದ್ರಶೇಖರ್ ನಡೆಗೆ ಅವರ ತಂದೆ ಹಾಗೂ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಕ್ಷಮೆಯಾಚಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರೂ, ಅದನ್ನು ಸಂಭ್ರಮಿಸುವ ಪರಿಸ್ಥಿತಿಯಲ್ಲಿ ನಾನಾಗಲಿ, ನನ್ನ ಕುಟುಂಬವಾಗಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಪಕ್ಷ ನಮ್ಮ ಮೇಲೆ ಭರವಸೆ ಇಟ್ಟು ಟಿಕೆಟ್ ನೀಡಿದಾಗ, ಸಮರ್ಥವಾಗಿ ಚುನಾವಣೆ ಎದುರಿಸಬೇಕು. ಯುದ್ಧಕ್ಕೆ ಹೊರಟವರು ಪಲಾಯನ ಮಾಡುವುದು ಹೇಡಿಗಳ ಕೆಲಸ. ಯಾವ ಪಕ್ಷದಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ನನ್ನ ಮಗ ಮಾಡಿರುವ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು.
ಚಂದ್ರಶೇಖರ್ ನಡೆ ಕೇವಲ ಬಿಜೆಪಿ ನಾಯಕರಿಗಷ್ಟೇ ಅಲ್ಲ, ನಮ್ಮ ಕುಟುಂಬ ಸದಸ್ಯರಿಗೂ ಬೇಸರ ತಂದಿದೆ. ಅವರಿಗೆ ಟಿಕೆಟ್ ನೀಡಿದವರ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಅಲ್ಲದೆ, ನನ್ನ ವಿಧಾನಪರಿಷತ್ ಸದಸ್ಯತ್ವ ಅವಧಿ ಮುಗಿಯುತ್ತಿದ್ದಂತೆ ನಾನು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಲಿಂಗಪ್ಪ ಹೇಳಿದರು.