×
Ad

ಉಪಚುನಾವಣೆಯ ಸೋಲನ್ನು ಒಪ್ಪಿಕೊಂಡು ಆತ್ಮಾವಲೋಕನಕ್ಕೆ ಜಾರಿದ ಬಿಜೆಪಿ ನಾಯಕರು

Update: 2018-11-07 22:45 IST
ಯಡಿಯೂರಪ್ಪ, ಸುರೇಶ್‌ ಕುಮಾರ್, ಶ್ರೀರಾಮುಲು

ಬೆಂಗಳೂರು, ನ.7: ಇದೇ ಮೊದಲ ಬಾರಿಗೆ ಬಿಜೆಪಿ ಚುನಾವಣೆಯೊಂದರಲ್ಲಿ ತಮಗಾದ ಸೋಲನ್ನು ಒಪ್ಪಿಕೊಂಡು, 4 ಕ್ಷೇತ್ರಗಳ ಉಪಚುನಾವಣೆಯ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆಂದು ಬಹಿರಂಗವಾಗಿ ಹೇಳಿರುವುದು ಗಮನಾರ್ಹವಾದ ಅಂಶವಾಗಿದೆ.

ಮಂಗಳವಾರ ಮಧ್ಯಾಹ್ನ 12ಕ್ಕೆ 2ವಿಧಾನಸಭೆ ಹಾಗೂ 3ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಶಾಸಕ ಸುರೇಶ್‌ ಕುಮಾರ್ ಪ್ರತಿಕ್ರಿಯಿಸಿ, ಉಪಚುನಾವಣೆಯಲ್ಲಿ ಬಿಜೆಪಿಗಾದ ಸೋಲನ್ನು ಸ್ವೀಕರಿಸುತ್ತೇವೆ ಹಾಗೂ ಇದು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯವೆಂದು ತಿಳಿಸಿದ್ದಾರೆ.

ಈ ಹಿಂದಿನ ಯಾವ ಚುನಾವಣೆಯ ಸೋಲಿನ ಸಂದರ್ಭದಲ್ಲೂ ಬಿಜೆಪಿ ನಾಯಕರು ತಮ್ಮ ಸೋಲನ್ನು ಒಪ್ಪಿಕೊಂಡಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಪಡೆದು ಸೋಲನ್ನು ಕಂಡಿದ್ದರೂ ಹೇಗಾದರು ಮಾಡಿ ಅಧಿಕಾರ ಪಡೆಯಲೇಬೇಕೆಂಬ ಹಪಾಹಪಿಯಲ್ಲಿ ನಾನಾ ಕಸರತ್ತು ಮಾಡಿ ಕೈ ಚೆಲ್ಲಿದ್ದರು.

ಬಳ್ಳಾರಿಗೆ ಲಗ್ಗೆ ಇಟ್ಟ ಕಾಂಗ್ರೆಸ್: ಕರಾವಳಿಯನ್ನು ಹೊರತು ಪಡಿಸಿದರೆ ಬಿಜೆಪಿ ಭದ್ರಕೋಟೆಯೆಂದೆ ಬಿಂಬಿತವಾಗಿದ್ದ ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿರುವುದು ಬಿಜೆಪಿ ಮುಖಂಡರ ನಿದ್ದೆ ಗೆಡಿಸಿದೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಹಿಡಿತದಲ್ಲಿದ್ದ ಬಳ್ಳಾರಿ ಕಾಂಗ್ರೆಸ್ ವಶಕ್ಕೆ ಹೋಗಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಃಪತನದ ಮುನ್ಸೂಚನೆಯೆಂದೆ ಭಾವಿಸಲಾಗುತ್ತಿದೆ.

ಬಳ್ಳಾರಿ ಕ್ಷೇತ್ರದ ಸೋಲಿನ ಕುರಿತು ಶಾಸಕ ಶ್ರೀರಾಮುಲು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಳ್ಳಾರಿ ಕ್ಷೇತ್ರದ ಸೋಲು ನಮಗಾದ ಹಿನ್ನಡೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ. ಜನರು ನಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿಕೆ ನೀಡಿರುವುದು, ಬಿಜೆಪಿಯ ಇಂದಿನ ದುಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನ ಜಾಣ್ಮೆಯ ನಡೆ: ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಅಭೂತಪೂರ್ವವಾಗಿ ಜಯಗಳಿಸಿದೆ. ಆದರೂ ಕಾಂಗ್ರೆಸ್ ನಾಯಕರು ಗೆಲುವಿನ ಕುರಿತು ಹಿಗ್ಗದೆ, ಜಾಣ್ಮೆಯಾಗಿ ಮಾತನಾಡಿರುವುದು ಸಾರ್ವಜನಿಕರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯದ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಯಾವುದೆ ಚುನಾವಣೆಯಲ್ಲಿ ಗೆಲುವು-ಸೋಲು ಸಾಮಾನ್ಯ. ಆದರೆ, ಚುನಾವಣೆ ವೇಳೆ ಯಾವುದೆ ಸಣ್ಣ ಘರ್ಷಣೆ ಉಂಟಾಗದಂತೆ ನೋಡಿಕೊಂಡ ಶ್ರೀರಾಮುಲು ಅಣ್ಣನಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News