ಹನೂರು: ಅನೈರ್ಮಲ್ಯತೆಯಿಂದ ಕೂಡಿದ ಚರಂಡಿ, ನೀರಿನ ಟ್ಯಾಂಕ್; ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಹನೂರು,ನ.7: ತಾಲೂಕಿನ ಎಲ್ಲೆಮಾಳ ಗ್ರಾಪಂ ವ್ಯಾಪ್ತಿಯ ಚಿಗತ್ತಾಪುರ ಗ್ರಾಮದ ಮಸೀದಿ ಹಿಂಬಾಗದ ಬೀದಿಯಲ್ಲಿರುವ ಚರಂಡಿ ಮತ್ತು ನೀರಿನ ಟ್ಯಾಂಕ್ ಸುತ್ತ ಅಸ್ವಚ್ಚತೆ ತಾಂಡವಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿಗತ್ತಾಪುರ ಗ್ರಾಮದ ಮಸೀದಿ ಹಿಂಭಾಗದ ಬಡಾವಣೆಯಲ್ಲಿರುವ ಚರಂಡಿ ಕಿರಿದಾಗಿದ್ದು, ಸಂಪೂರ್ಣ ಹದಗೆಟ್ಟಿದೆ. ಸುತ್ತಮುತ್ತಲ ಕಲುಷಿತ ನೀರು ಚರಂಡಿ ಸೇರಿ ಮಳೆ ನೀರು ಹರಿದು ಬಂದರೆ ರಸ್ತೆಯಲ್ಲೇ ಹರಿಯುವುದರ ಜೊತೆಗೆ ಕೆಲ ಸಮೀಪದ ಮನೆಗಳಿಗೂ ಸಹ ನುಗ್ಗುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ. ಅಲ್ಲದೆ, ಈ ಬೀದಿಯಲ್ಲಿರುವ ನೀರಿನ ಟ್ಯಾಂಕ್ ಗಳು ತುಂಬಾ ಹಳೆಯದಾಗಿದ್ದು, ಇದರ ಸುತ್ತ ಸಂಪೂರ್ಣ ಪಾಚಿ ಕಟ್ಟಿ ನೀರಿನ ಸಂಗ್ರಹಣೆಗೆ ಯೋಗ್ಯವಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಈ ಟ್ಯಾಂಕ್ ನ ಸುತ್ತ ಗಿಡಗಳು ಬೆಳೆದು, ಕಲುಷಿತ ನೀರು ನಿಂತು ಅನೈರ್ಮಲ್ಯ ತಾಂಡವಾಡುತ್ತಿರುವುದರಿಂದ ಸೊಳ್ಳೆಗಳ ಅವಾಸಸ್ಥಾನವಾಗಿ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಎದುರಾಗಿದೆ.
ಈ ಸಂಬಂಧ ಗ್ರಾಪಂ ಆಡಳಿತ ಮಂಡಳಿ ಇತ್ತ ಗಮನ ಹರಿಸಿ ಅಗತ್ಯ ಕ್ರಮವಹಿಸುವಂತೆ ಇಲ್ಲಿನ ಯುವಕರು ಮತ್ತು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಗ್ರಾಮದ ಕೆಲ ಬಡಾವಣೆಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಅನೈರ್ಮಲ್ಯ ತಾಂಡವಾಡುತ್ತಿದ್ದು, ಸ್ವಚ್ಚತೆ ಮರೀಚಿಕೆಯಾಗಿದೆ. ಈ ಗ್ರಾಮದ ಬಡಾವಣೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕಾದ ಜಿಪಂ ಯಾಕೋ ಮೌನಕ್ಕೆ ಶರಣಾಗಿದೆ.
-ಮಹಮ್ಮದ್, ಚಿತ್ತಾಪುರ ಗ್ರಾಮದ ನಿವಾಸಿ
ಎಲ್ಲೆಮಾಳ ಗ್ರಾಪಂ. ಯಲ್ಲಿ ಕೆಲ ದಿನಗಳಿಂದಷ್ಠೆ ಪಿಡಿಒಯಾಗಿ ಕರ್ತವ್ಯಕ್ಕೆ ಹಾಜರಿಯಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವ ದಿಸೆಯಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದ್ದು , ಬಡಾವಣೆಯ ಅಸ್ವಚ್ಚತೆ ಸಂಬಂಧ ತುರ್ತಾಗಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ರಮೇಶ್ ಪಿಡಿಒ, ಎಲ್ಲೇಮಾಳ ಗ್ರಾಪಂ