ಉಪಚುನಾವಣಾ ಅನುಭವದಿಂದ ಬಿಜೆಪಿ ಪಾಠ ಕಲಿಯಲಿದೆ: ಶಾಸಕ ಸಿ.ಟಿ.ರವಿ

Update: 2018-11-07 17:34 GMT

ಚಿಕ್ಕಮಗಳೂರು, ನ.7: ವಿಧಾನ ಪರಿಷತ್ ಹಾಗೂ ಲೋಕಾಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಬೀಗುತ್ತಿರುವುದು ತಾತ್ಕಾಲಿಕ. ಈ ಚುನಾವಣೆ ಮುಂದಿನ ಬರಲಿರುವ ಲೋಕಸಭೆ ಚುನಾವಣೆಗೆ ಯಾವುದೇ ಕಾರಣಕ್ಕೂ ಮಾನದಂಡವಾಗುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಯುದ್ಧದಲ್ಲಿ ಗೆದ್ದಿದ್ದೇವೆ ಎಂದು ಬೀಗುವುದು ಬೇಡ. ಪ್ರತೀ ಚುನಾವಣೆಗಳಲ್ಲಿ ವಿಭಿನ್ನ ಫಲಿತಾಂಶವಿರುತ್ತದೆ. ಈ ಉಪಚುನಾವಣೆಗಳಲ್ಲಿ ವಿಭಿನ್ನ ಫಲಿತಾಂಶ ಬಂದಿದೆಯೇ ಹೊರತು ಫಲಿತಾಂಶ ಲೋಕಸಭಾ ಚುನಾವಣೆಗೆ ಮಾನದಂಡವಾಗುವುದಿಲ್ಲ ಎಂದರು.

ಈ ಹಿಂದೆ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಏನಾಯಿತು ಎಂದು ಪ್ರಶ್ನಿಸಿದ ಅವರು, ಈ ಉಪ ಚುನಾವಣೆಯಿಂದ ಬಿಜೆಪಿ ಕಥೆ ಮುಗಿಯಿತು, ಬಿಜೆಪಿ ಬಾಗಿಲು ಬಂದ್ ಮಾಡಿದ್ದೇವೆ ಎಂದುಕೊಂಡರೆ ಅದು ಅವರ ಭ್ರಮೆಯಷ್ಟೇ. ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಿದ್ಧಾಂತದ ಆಧಾರದ ಮೇಲೆ ಪಕ್ಷವನ್ನು ಇನ್ನಷ್ಟು ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಕಾರ್ಯತಂತ್ರ ಉತ್ತಮವಾಗಿ ನಿರ್ವಹಿಸಿವೆ. ಅದು ನಮಗೊಂದು ಪಾಠ ಕಲಿಸಿದೆ. ರಾಮನಗರದಲ್ಲಿ ನಡೆದಿದ್ದು ರಾಜಕೀಯ ವ್ಯಭಿಚಾರ ಮತ್ತು ವ್ಯಾಪಾರ. ಚುನಾವಣೆಗೂ ಮುನ್ನ ಡಿಕೆಶಿ ಅವರ ಸಹೋದರನ ಮನೆಯಲ್ಲಿ ಏನೆಲ್ಲಾ ಹಣದ ವ್ಯವಹಾರ ನಡೆದಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮೈತ್ರಿ ಸರಕಾರದ ಮುಂದೆ ಚಂದ್ರಶೇಖರ್ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೂ ಆಶ್ಚರ್ಯ ಪಡಬೇಕಿಲ್ಲ ಎಂದು ಲೇವಡಿ ಮಾಡಿದ ಅವರು, ಚಂದ್ರಶೇಖರ್ ಅವರು ಸೈದ್ಧಾಂತಿಕ ನಿಲುವಿರದ ವ್ಯಕ್ತಿಯಾಗಿದ್ದು, ಅವರ ಆಮಿಷಕ್ಕೆ ಒಳಗಾಗುವ ಮನೋಭಾವದಿಂದ ನಾವು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತಾಯಿತು ಎಂದರು. 

ಬಳ್ಳಾರಿ ಚುನಾವಣೆ ವಿಚಾರಕ್ಕೆ ಬಂದರೆ ರಾಜ್ಯದ ಇತಿಹಾಸದಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿರುವುದು ಇದೇ ಮೊದಲು. ನಮ್ಮ ಸೋಲಿಗೆ ಜನಾರ್ಧನ ರೆಡ್ಡಿ ಹೇಳಿಕೆ ಮೊದಲ್ಗೊಂಡು ಹತ್ತಾರು ಕಾರಣಗಳಿವೆ. ಇಷ್ಟೊಂದು ಅಂತರದಿಂದ ಸೋಲುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ.  ಬಿಜೆಪಿಗೆ ಈ ಚುನಾವಣೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದಕ್ಕೆ ಇದು ಉತ್ತಮ ಸಂದೇಶ ಎಂದರು.

ಮಂಡ್ಯ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಹೆಚ್ಚು ಮತ ಪಡೆದಿದ್ದಾರೆ. ಎಲ್ಲಿ ನಮ್ಮ ಅಸ್ತಿತ್ವ ಇಲ್ಲ ಎಂದುಕೊಂಡಿದೇವೋ ಅಲ್ಲೇ ಅಧಿಕ ಮತ ಬಂದಿದೆ. ಇದು ಪಕ್ಷ ಸಂಘಟನೆಗೆ ಸಹಾಯವಾಗಲಿದೆ. ಜಮಖಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸಾವಿನ ಅನುಕಂಪ ಕಾಂಗ್ರೆಸ್ ಅಭ್ಯರ್ಥಿಗಿದ್ದರೆ, ನಮ್ಮ ಅಭ್ಯರ್ಥಿಗೆ ಸೋಲಿನ ಅನುಕಂಪವಿತ್ತು. ಆದರೆ, ಸಾವಿನ ಅನುಕಂಪ ಸೋಲಿನ ಅನುಕಂಪವನ್ನು ಹೊಡೆದು ಹಾಕಿದೆ ಎಂದರು.

ಪಕ್ಷ ಉಪ ಚುನಾವಣೆಯಲ್ಲಿ ಸೋತಿದೆ. ಅದಕ್ಕೆ ಹಲವಾರು ಕಾರಣಗಳಿವೆ. ಶ್ರೀರಾಮುಲು ಪಕ್ಷದ ಓರ್ವ ಪ್ರಭಾವಿ ಮುಖಂಡ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಪಕ್ಷದ ಟಿಕೆಟ್ ನೀಡುವುದರಿಂದ ಹಿಡಿದು ಎಲ್ಲ ಜವಾಬ್ದಾರಿಯನ್ನೂ ಅವರ ಮೇಲೆ ಹೇರಿದ್ದು ಸಹ ಪಕ್ಷದ ಹಿನ್ನೆಡೆಗೆ ಕಾರಣವಾಗಿದೆ. ಸೋಲಿಗೆ ಹಲವು ಕಾರಣಗಳಿವೆ. ಅವುಗಳನ್ನು ಪಕ್ಷದ ಒಳಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News