ಶಾಸಕನಾಗಿ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತೇನೆ: ಶಾಸಕ ಟಿ.ಡಿ.ರಾಜೇಗೌಡ

Update: 2018-11-07 18:02 GMT

ಶೃಂಗೇರಿ, ನ.7: ಶಾಸಕನಾಗಿ ಜನಪ್ರತಿನಿಧಿಯಾಗಿ ಜಾತಿ, ಮತ, ವರ್ಣ ಬೇದ ಮಾಡದೆ, ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವುದಾಗಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಶೃಂಗೇರಿಯ ವಿದ್ಯಾರಣ್ಯಪುರ ಗ್ರಾಮ ಪಂ. ನ ರಾಜಾನಗರದ, ವಿದ್ಯಾಭಾರತೀ ಸಭಾ ಭವನದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಭಾನುವಾರ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಜನಪರ ಕಾರ್ಯಕ್ರಮಗಳಿಗೆ ವೈಯಕ್ತಿಕ ಸಹಕಾರ ಮತ್ತು ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ. ಬ್ರಾಹ್ಮಣ ವರ್ಗದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಕೆಳ ಮಟ್ಟದಲ್ಲಿರುವವರಿಗೆ, ಸರ್ಕಾರದ ಸೌಲಭ್ಯ ನೀಡುವ ಪ್ರಯತ್ನ ಮಾಡಲಾಗುತ್ತದೆ. ಶೃಂಗೇರಿ ಆಸುಪಾಸಿನ ರಸ್ತೆ ಅಭಿವೃದ್ಧಿಗೆ ಸರ್ಕಾರ ಈಗಾಗಲೇ 12 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಹರಿಹರಪುರ ಮಠದ ಸುತ್ತಲಿನ ರಸ್ತೆ ಅಭಿವೃದ್ಧಿಗಾಗಿ ಒಂದು ಕೋಟಿ ಹಾಗೂ ಕೊಪ್ಪ ಗಾಯತ್ರಿ ಮಂದಿರಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದರು.

ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಾವಿನಕಾಡು ರಂಗನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಾಹ್ಮಣ ಸಮುದಾಯಕ್ಕೆ ನೂತನ ಶಾಸಕರು ಸಹಕಾರ ನೀಡಿ, ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಿ ಎಂದರು.

ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಶಾಸಕರನ್ನು ಗೌರವಿಸಲಾಯಿತು. ತಾಲ್ಲೂಕು ಬ್ರಾಹ್ಮಣ ಮಹಾಸಭಾದ ನಿರ್ದೇಶಕರಾದ ನಾಗರಾಜ್, ಬಿ.ಎಲ್.ರವಿಕುಮಾರ್, ವಿಜಯಕುಮಾರ್, ಜಿ.ಎಂ.ಸತೀಶ್, ಕೆ.ಎಂ.ರಮೇಶ್ ಭಟ್, ಮೇಗಳಬೈಲು ಚಂದೃಶೇಖರ್, ಉಮೇಶ್ ಪುದುವಾಳ್, ನಟರಾಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News